ಮೂರ್ಜೆ; ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಿಬ್ಬಂದಿ ಮೃತ್ಯು

Update: 2021-10-15 11:26 GMT
ಅಬೂಬಕರ್

ಬಂಟ್ವಾಳ, ಅ.15: ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಪುಂಜಾಲಕಟ್ಟೆ  ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಅವರು ಮೃತಪಟ್ಟ ಘಟನೆ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ನೇರಳಕಟ್ಟೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ವೇಣೂರಿನ ಮರೊಳಿ ನಿವಾಸಿ ಅಬೂಬಕರ್ (47) ಮೃತರು ಎಂದು ಗುರುತಿಸಲಾಗಿದೆ.

ಇವರು ವಾಮದಪದವಿನಲ್ಲಿ ನಡೆದ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಭಾಗವಹಿಸಿ ವಾಪಾಸಾಗುತ್ತಿದ್ದ ವೇಳೆ ನೇರಳಕಟ್ಟೆ ಬಳಿ ಎದುರಿನಿಂದ ಬಂದ ಇನ್ನೊಂದು ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದೆ.

ಘಟನೆಯಿಂದ ಇನ್ನೊಂದು ಬೈಕಿನ ಸವಾರ ಇರ್ವತ್ತೂರು ನಿವಾಸಿ ದುರ್ಗಾಪ್ರಸಾದ್ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುಂಜಾಲಕಟ್ಟೆ ಠಾಣೆಯ ಇತರ ಸಿಬ್ಬಂದಿಗಳೊಂದಿಗೆ ಗೃಹ ಪ್ರವೇಶಕ್ಕೆ ತೆರಳಿದ್ದು, ಅಬೂಬಕರ್ ಅವರು ತನ್ನ ಬೈಕಿನಲ್ಲಿ ವಾಪಸು ಆಗುತ್ತಿದ್ದರೆ ಉಳಿದವರು ಇಲಾಖೆಯ ಜೀಪಿನಲ್ಲಿ ಹಿಂದಿನಿಂದ ಬರುತ್ತಿದ್ದರು. ನೇರಳಕಟ್ಟೆ ಸಮೀಪ ಎರಡು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಈ ಸಂದರ್ಭ ಹಿಂದಿನಿಂದ ಜೀಪಿನಲ್ಲಿ ಬರುತ್ತಿದ್ದ ಪೊಲೀಸ್ ಸಿಬ್ಬಂದಿ ಗಾಯಳುಗಳನ್ನು ತಕ್ಷಣ ಜೀಪಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದು ಆಬೂಬಕರ್ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಪತ್ರೆಗೆ ಬೀಗ: ಗಾಯಾಳು ಆಬೂಬಕರ್ ಅವರನ್ನು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಯಿತು. ಈ ವೇಳೆ ಆಸ್ಪತ್ರೆಗೆ ಬೀಗ ಹಾಕಲಾಗಿತ್ತು. ಇಲ್ಲಿನ ವೈದ್ಯರು ರಜೆಯ ಮೇಲೆ ತೆರಳಿದ್ದರೆ ಇತರ ಸಿಬ್ಬಂದಿ ಕೂಡ ಆಸ್ಪತ್ರೆಯಲ್ಲಿ ಇರಲಿಲ್ಲ.

ಚಿಂತಾಜನಕ ಸ್ಥಿತಿಯಲ್ಲಿದ್ದ ಅಬೂಬಕರ್ ಅವರನ್ನು ತಕ್ಷಣ ಅದೇ ಜೀಪಿನಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಹೆದ್ದಾರಿಯಲ್ಲಿರುವ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಒಬ್ಬನೇ ಒಬ್ಬ ಸಿಬ್ಬಂದಿ ಇಲ್ಲದೆ ಬೀಗ ಹಾಕಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಜೀವ ಉಳಿಸಬೇಕಾದ ಸರಕಾರಿ ಆಸ್ಪತ್ರೆಗಳ ಬೇಜವಾಬ್ದಾರಿತನಕ್ಕೆ ಇದೊಂದು ಉದಾಹರಣೆ ಆಗಿದೆ.

ಈ ಹಿಂದೆಯೂ ಕೂಡ ಇದೇ ರೀತಿಯ ಘಟನೆಗಳಾದಗಲೂ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ, ಗಾಯಳುಗಳು, ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಪರದಾಡಿದ ಪ್ರಸಂಗಗಳು ನಡೆದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶುಕ್ರವಾರ ನಡೆದ ಅಪಘಾತದಿಂದ ಗಂಭೀರ ಗಾಯಗೊಂಡ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಚ್.ಸಿ. ಆಬೂಬಕರ್ ಅವರಿಗೆ ತುರ್ತು ಚಿಕಿತ್ಸೆ ದೊರಕದಿದ್ದು ಅಲ್ಲಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿಹೋಗಿದೆ. ಇವರ ಅಕಾಲಿಕ ಸಾವಿನಿಂದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳ ಕಣ್ಣೆದುರಲ್ಲೆ ಪ್ರಾಣ ಬಿಟ್ಟ ಸಹಪಾಠಿಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.

ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News