ಅಫ್ಘಾನಿಸ್ತಾನದ ಕಂದಹಾರ್ ಮಸೀದಿಯಲ್ಲಿ ಸ್ಫೋಟ: 32 ಸಾವು, 53 ಗಾಯ

Update: 2021-10-15 16:51 GMT
ಸಾಂದರ್ಭಿಕ ಫೋಟೊ

ಕಾಬೂಲ್, ಅ.15: ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ನಗರದಲ್ಲಿನ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಟ 32 ಮಂದಿ ಮೃತರಾಗಿದ್ದು 53 ಮಂದಿ ಗಾಯಗೊಂಡಿರುವುದಾಗಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಇದುವರೆಗೆ 32 ಮೃತದೇಹಗಳನ್ನು ಹಾಗೂ 53 ಗಾಯಾಳುಗಳನ್ನು ಆಸ್ಪತ್ರೆಗೆ ತರಲಾಗಿದೆ ಎಂದು ನಗರದ ಮೀರ್ವಾಯಿಸ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ‌

ಶಿಯಾ ಮಸೀದಿಯಲ್ಲಿ ನಡೆದ ಈ ಬಾಂಬ್ ದಾಳಿ 30ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದನ್ನು ಪ್ರಾಂತೀಯ ಅಧಿಕಾರಿಗಳು ದೃಢಪಡಿಸಿದ್ದು ಸ್ಥಳದಲ್ಲಿ ಕನಿಷ್ಟ 15 ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿದೆ ಎಂದಿದ್ದಾರೆ. ಒಟ್ಟು 3 ಸ್ಫೋಟಗಳು ಸಂಭವಿಸಿದ್ದು ಮೊದಲನೆಯ ಸ್ಫೋಟ ಮಸೀದಿಯ ಮುಖ್ಯದ್ವಾರದ ಬಳಿ, ಮತ್ತೊಂದು ಮಸೀದಿಯ ದಕ್ಷಿಣ ಭಾಗದಲ್ಲಿ, ಮೂರನೆಯ ಸ್ಫೋಟ ಪ್ರಾರ್ಥನೆಗೆ ಮೊದಲು ಜನರು ಸ್ವಚ್ಛತೆ ಮಾಡಿಕೊಳ್ಳುವ ಸ್ಥಳದಲ್ಲಿ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.

 4 ಆತ್ಮಹತ್ಯಾ ಬಾಂಬರ್ಗಳು ಮಸೀದಿಯ ಮೇಲೆ ದಾಳಿ ನಡೆಸಿರುವುದಾಗಿ ಮತ್ತೊಬ್ಬ ಪ್ರತ್ಯಕ್ಷದರ್ಶಿ ಮುರ್ತಝಾ ಹೇಳಿದ್ದಾರೆ. ಎಎಫ್ಪಿ ಸುದ್ಧಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಶುಕ್ರವಾರ ಪ್ರಾರ್ಥನೆಗೆ ಸುಮಾರು 500 ಜನ ಸೇರುತ್ತಾರೆ. ಈ ಸಂದರ್ಭ ಮಸೀದಿಯೊಳಗೆ ಬಂದ ನಾಲ್ವರು ಆತ್ಮಹತ್ಯಾ ಬಾಂಬರ್ಗಳಲ್ಲಿ ಇಬ್ಬರು ಮುಖ್ಯದ್ವಾರದ ಬಳಿ ಬಾಂಬ್ಗಳನ್ನು ಬಿಸಾಡಿದರೆ, ಇನ್ನಿಬ್ಬರು ಮಸೀದಿಯೊಳಗೆ ತೆರಳಿ ಅಲ್ಲಿ ಸ್ಫೋಟ ನಡೆಸಿದರು ಎಂದು ತಿಳಿಸಿದ್ದಾರೆ. 

ಕಂದಹಾರ್ ನಗರದಲ್ಲಿ ನಮ್ಮ ಶಿಯಾ ಸಮುದಾಯದ ಸಹೋದರರ ಮಸೀದಿಯಲ್ಲಿ ಸ್ಫೋಟ ನಡೆದು ನಮ್ಮ ಹಲವು ದೇಶವಾಸಿಗಳು ಮೃತಪಟ್ಟಿರುವುದು ಮತ್ತು ಗಾಯಗೊಂಡಿವುದರಿಂದ ಅತೀವ ದುಖವಾಗಿದೆ. ಘಟನೆಯ ಬಗ್ಗೆ ಪರಿಶೀಲಿಸಿ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ತಾಲಿಬಾನ್ ವಿಶೇಷ ಪಡೆಯನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಫ್ಘಾನಿಸ್ತಾನದ ಒಳಾಡಳಿತ ಸಚಿವಾಲಯದ ವಕ್ತಾರ ಕರಿ ಸಯಿದ್ ಖೋಸ್ತಿ ಟ್ವೀಟ್ ಮಾಡಿದ್ದಾರೆ. 

ಮಸೀದಿಯ ಆವರಣದಲ್ಲಿ ಹಲವು ಮೃತದೇಹಗಳು ಹರಡಿಕೊಂಡಿರುವ ಹಾಗೂ ಗಾಯಾಳುಗಳು ಬಿದ್ದುಕೊಂಡಿರುವ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಸ್ಫೋಟಕ್ಕೆ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಮೃತಪಟ್ಟವರ ಹಾಗೂ ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News