ಗಂಗೊಳ್ಳಿಯಲ್ಲಿ ಅ.16ರಂದು ಮದ್ಯಮಾರಾಟ ನಿಷೇಧ
ಉಡುಪಿ, ಅ.15: ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗೊಳ್ಳಿ ಗ್ರಾಮದಲ್ಲಿ ಕಳೆದ ಅ.11ರಿಂದ ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ಸೇವಾ ಸಂಘದ ವತಿಯಿಂದ ನಡೆದಿರುವ 47ನೇ ಶಾರದೋತ್ಸವ ಕಾರ್ಯಕ್ರಮದಲ್ಲಿ ಶಾರದ ಮೂರ್ತಿಯ ವಿಸರ್ಜನೆ ಅ.16ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಗಂಗೊಳ್ಳಿ ಗ್ರಾಮದಲ್ಲಿ ನಾಳೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರು ಆದೇಶ ಹೊರಡಿಸಿದ್ದಾರೆ.
ಗಂಗೊಳ್ಳಿ ಗ್ರಾಮದಲ್ಲಿ ಶಾರದ ಮೂರ್ತಿಯ ವಿಸರ್ಜನಾ ಕಾರ್ಯಕ್ರಮದ ವೇಳೆ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ, ಹೊಸಾಡು ಹಾಗೂ ತ್ರಾಸಿ ಗ್ರಾಮದ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯ ಮಾರಾಟ ಸನ್ನದುಗಳನ್ನು ಹೊಂದಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್‌ಗಳಲ್ಲಿ ಮದ್ಯ ಮಾರಾಟವನ್ನು ಅ.16ರಂದು ಬೆಳಗ್ಗೆ 6 ರಿಂದ ರಾತ್ರಿ 11 ಗಂಟೆಯವರೆಗೆ ಮುತ್ತಲು ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ ಗಂಗೊಳ್ಳಿ ಪೊಲೀಸ್ ಠಾಣೆ ಸರಹದ್ದಿನ ಗಂಗೊಳ್ಳಿ, ಗುಜ್ಜಾಡಿ, ಹೊಸಾಡು ಹಾಗೂ ತ್ರಾಸಿ ಗ್ರಾಮಗಳ ವ್ಯಾಪ್ತಿಯಲ್ಲಿ ಒಣದಿನ (ಡ್ರೈ ಡೇ) ಎಂದು ಘೋಷಿಸಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶ ತಿಳಿಸಿದೆ.