ಸಂಗೊಳ್ಳಿ ರಾಯಣ್ಣ ರೈಲಿಗೆ ಹೆಚ್ಚುವರಿ ಕೋಚ್
ಉಡುಪಿ, ಅ.15: ಪ್ರತಿದಿನ ಬೆಂಗಳೂರು ಮತ್ತು ಕಾರವಾರ ನಡುವೆ ಸಂಚರಿಸುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಶೇಷ ರೈಲಿಗೆ ತಾತ್ಕಾಲಿಕ ನೆಲೆಯಲ್ಲಿ ಒಂದು ಹೆಚ್ಚುವರಿ ಸ್ಲೀಪರ್ ಕೋಚ್‌ನ್ನು ಜೋಡಿಸಲಾಗಿದೆ. ಇದರಿಂದ ಇನ್ನು ಮುಂದೆ ಈ ರೈಲು 15 ಕೋಚ್‌ಗಳನ್ನು ಹೊಂದಿರುತ್ತದೆ ಎಂದು ದಕ್ಷಿಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಮಡಗಾಂವ್-ಕಾರವಾರ ನಡುವೆ ಡೆಮು ರೈಲು: ಈ ನಡುವೆ ಕಾರವಾರ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ದೈನಂದಿನ ಪ್ಯಾಸೆಂಜರ್ ರೈಲು (ಡೆಮು) ಓಡಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಅ.18ರಿಂದ ಈ ರೈಲು ಪ್ರತಿದಿನ ಸಂಜೆ 7:17ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ಹೊರಡಲಿದ್ದು, ಅದೇ ದಿನ ರಾತ್ರಿ 8:35ಕ್ಕೆ ಕಾರವಾರ ತಲುಪಲಿದೆ.
ಅ.19ರಿಂದ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಕಾರವಾರದಿಂದ ಹೊರಡುವ ಡೆಮು ರೈಲು ಬೆಳಗ್ಗೆ 7:10ಕ್ಕೆ ಮಡಗಾಂವ್ ತಲುಪಲಿದೆ. ಈ ರೈಲಿಗೆ ಬಲ್ಲಿ, ಕ್ಯಾನಕೋನಾ, ಲೋಲಿಂ ಹಾಗೂ ಅಸ್ನೋಟಿ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಈ ರೈಲಿಗೆ ಸೀಟು ಕಾದಿರಿಸುವ ವ್ಯವಸ್ಥೆ ಇರುವುದಿಲ್ಲ. ರೈಲು ಒಟ್ಟು 8 ಡೆಮು ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.