ತ್ರಿಶೂಲ ದೀಕ್ಷೆ ಸಮರ್ಥಿಸಿಕೊಂಡ ವಿಹಿಂಪ ಮುಖಂಡ; ಬಾಂಬ್, ಗ್ರೆನೇಡ್ ದೀಕ್ಷೆ ಕೊಟ್ಟಿದ್ದಲ್ಲ: ಶರಣ್ ಪಂಪ್‌ವೆಲ್
ಮಂಗಳೂರು, ಅ.15: ನಾವು ಶಕ್ತಿಯ ಆರಾಧಕರು. ಆತ್ಮರಕ್ಷಣೆ, ಧರ್ಮರಕ್ಷಣೆ, ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಲು ಈ ತ್ರಿಶೂಲ ದೀಕ್ಷೆ ನೀಡಲಾಗಿದೆಯೇ ವಿನಃ ಬಾಂಬ್, ಗ್ರೆನೈಡ್ ಕೊಟ್ಟಿದ್ದಲ್ಲ ಎಂಬ ಹೇಳಿಕೆ ನೀಡುವ ಮೂಲಕ ವಿಶ್ವ ಹಿಂದೂ ಪರಿಷತ್‌ನ ಮಂಗಳೂರು ವಿಭಾಗದ ಕಾರ್ಯದರ್ಶಿಶರಣ್ ಪಂಪ್‌ವೆಲ್ ತ್ರಿಶೂಲ ದೀಕ್ಷೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ವಿತರಣೆ ಮಾಡಿದ ಕಾರ್ಯಕ್ರಮದ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಆದರೆ, ಕಾರ್ಯಕರ್ತರಲ್ಲಿ ಧೈರ್ಯ ಹೆಚ್ಚಿಸಲು ಈ ಕಾರ್ಯಕ್ರಮ ಆಯೋಜಿಸಿದ್ದೆವು. ನಮ್ಮ ಕಾರ್ಯಾಲಯದಲ್ಲಿ ತ್ರಿಶೂಲ ನೀಡಿದ್ದೇವೆ. ಇದು ಹೊಸದೇನಲ್ಲ. ಹೊಸ ಕಾರ್ಯಕರ್ತರಿಗೆ ಇಡೀ ದೇಶದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ ಎಂದರು.
ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ತ್ರಿಶೂಲ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ಆಗಿರಲಿಲ್ಲ. ಆಯುಧ ಪೂಜೆಯ ದಿನದಂದು ತ್ರಿಶೂಲ ದೀಕ್ಷೆ ಕಾರ್ಯಕ್ರಮ ಮಾಡಿದ್ದೇವೆ. ಇದು ಯಾರ ವಿರುದ್ಧವೂ ಅಲ್ಲ. ಯಾರನ್ನಾದರು ಕೊಲ್ಲಬೇಕು ಅಥವಾ ಇನ್ನೊಬ್ಬರಿಗೆ ತೊಂದರೆ ಕೊಡಬೇಕು ಎನ್ನುವ ದುರುದ್ದೇಶದಿಂದ ಈ ಕಾರ್ಯಕ್ರಮ ಮಾಡಿಲ್ಲ. ಕೇವಲ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಉಂಟು ಮಾಡಲು ಕಾನೂನುಬದ್ಧವಾಗಿಯೇ ಕಾರ್ಯಕ್ರಮ ಮಾಡಿದೆವು ಎಂದು ಹೇಳಿದರು.
ಇದೊಂದು ಸ್ಟೀಲ್‌ನ ವಸ್ತು. ಇದಕ್ಕೆ ತ್ರಿಶೂಲದ ಆಕಾರ ನೀಡಲಾಗಿದೆ. ಇದು ಹರಿತವೂ ಇಲ್ಲ. ಇದರಿಂದ ಏನೂ ಆಗಲ್ಲ. ಇದರಿಂದ ಯಾರನ್ನೂ ಕೊಲ್ಲಬೇಕು ಅಥವಾ ಇನ್ನೊಬ್ಬರಿಗೆ ಚುಚ್ಚಬೇಕು ಅಥವಾ ಮತ್ತೊಬ್ಬರಿಗೆ ಏನನ್ನಾದರೂ ಮಾಡಬೇಕು ಎನ್ನುವ ಉದ್ದೇಶವಿಲ್ಲ. ಕಾನೂನುಬದ್ಧವಾಗಿಯೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ತ್ರಿಶೂಲ ವಿತರಿಸುವ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ಮಾಡಿಲ್ಲ; ನಮ್ಮ ಮನೆ, ಕಾರ್ಯಾಲಯದಲ್ಲಿ ಮಾಡಿದೆವು. ಪ್ರತಿವರ್ಷ ಬಜರಂಗದಳ ಕಾರ್ಯಕರ್ತರಿಗೆ 10ರಿಂದ 15 ದಿನಗಳ ಪ್ರಶಿಕ್ಷಣದಂತಹ ಕಾರ್ಯಕ್ರಮ ಕೊಡುತ್ತೇವೆ. ಅಂತಹ ಕಾರ್ಯಕ್ರಮದಲ್ಲಿ ತ್ರಿಶೂಲದಂತಹ ದೀಕ್ಷೆ ಕೊಟ್ಟು ಸಂಕಲ್ಪ ಮಾಡಿಸುತ್ತೇವೆ ಎಂದರು.
ಓರ್ವ ಕಾರ್ಯಕರ್ತ ಸಂಘಟನೆಯಲ್ಲಿ ಕೆಲಸ ಮಾಡಿದ ಮೇಲೆ ಆತ ದೇಶ, ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು ಎನ್ನುವ ಸಂಕಲ್ಪ ತೊಡುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ಮಾಡುತ್ತಿದ್ದೇವೆ. ನಮ್ಮಲ್ಲಿ ಶಸ್ತ್ರಪೂಜೆಯೂ ಚಾಲ್ತಿಯಲ್ಲಿದೆ ಎಂದು ಹೇಳಿದರು.