ಮಂಗಳೂರು: ಕಳೆದುಹೋಗಿದ್ದ ವಿದ್ಯಾರ್ಥಿಯ ಪರ್ಸ್ ಮರಳಿ ನೀಡಿದ ರಿಕ್ಷಾ ಚಾಲಕ ಮುಹಮ್ಮದ್ ಹನೀಫ್ ಗೆ ಕಮಿಷನರ್ ಸನ್ಮಾನ

Update: 2021-10-15 16:08 GMT

ಮಂಗಳೂರು, ಅ.15: ರಸ್ತೆ ಬದಿಯಲ್ಲಿ ಸಿಕ್ಕಿದ್ದ ಪರ್ಸ್‌ನ್ನು ಪೊಲೀಸರಿಗೆ ಒಪ್ಪಿಸಿ, ತನ್ಮೂಲಕ ಸೊತ್ತಿನ ಮಾಲಕರಿಗೆ ತಲುಪಿಸಿ ಇಲ್ಲಿನ ರಿಕ್ಷಾ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇಂತಹ ಪ್ರಾಮಾಣಿಕತೆಗೆ ಮಂಗಳೂರು ಮತ್ತೊಮ್ಮೆ ಸಾಕ್ಷಿಯಾಗಿದೆ.

ಆಟೊರಿಕ್ಷಾ ಚಾಲಕ ಮುಹಮ್ಮದ್ ಹನೀಫ್ ಎಂಬವರೇ ಪರ್ಸ್‌ನ್ನು ಮರಳಿಸಿದವರು.

ಮುಹಮ್ಮದ್ ಹನೀಫ್ ಸುಮಾರು 15 ವರ್ಷಗಳಿಂದ ನಗರದಲ್ಲಿ ಆಟೊ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂದಿನಂತೆ ತನ್ನ ಕಾಯಕದಲ್ಲಿ ನಿರತನಾಗಿದ್ದ ಹನೀಫ್, ಶುಕ್ರವಾರ ಬೆಳಗ್ಗೆ 9:30ರ ಸುಮಾರಿಗೆ ನಗರದ ಅತ್ತಾವರದ ರಸ್ತೆ ಕಡೆಗೆ ತೆರಳುತ್ತಿದ್ದರು. ಬಿಗ್‌ ಬಝಾರ್ ಮಳಿಗೆ ಸಮೀಪಿಸುತ್ತಿದ್ದಂತೆ ರಸ್ತೆ ಬದಿ ಪರ್ಸ್ ಬಿದ್ದಿರುವುದು ಕಂಡುಬಂದಿದೆ. ರಿಕ್ಷಾ ನಿಲ್ಲಿಸಿ, ಪರ್ಸ್ ಎತ್ತಿಕೊಂಡು ನೋಡಿದಾಗ 10,200 ರೂ. ನಗದು, ಎಟಿಎಂ, ಆಧಾರ್ ಕಾರ್ಡ್ ಸಹಿತ ಮಹತ್ವದ ದಾಖಲೆಗಳು ಅದರೊಳಗೆ ಇರುವುದು ಪತ್ತೆಯಾಗಿದೆ. ಕೂಡಲೇ ತನ್ನ ರಿಕ್ಷಾದಲ್ಲಿ ಪರ್ಸ್ ತೆಗೆದುಕೊಂಡು ಬಂದು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಒಪ್ಪಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ.

ಚಾಲಕ ಮುಹಮ್ಮದ್ ಹನೀಫ್ ತನಗೆ ಸಿಕ್ಕಿದ್ದ ಪರ್ಸ್‌ನ್ನು ನಗರದ ಶಾಲೆಯೊಂದರ ವಿದ್ಯಾರ್ಥಿ ದುಷ್ಯಂತ್ ಅವರಿಗೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಮ್ಮುಖದಲ್ಲಿ ಮರಳಿಸಿದರು. ನಂತರ ಚಾಲಕ ಮುಹಮ್ಮದ್ ಹನೀಫ್ ಅವರಿಗೆ ಮಂಗಳೂರು ಪೊಲೀಸ್ ಆಯುಕ್ತಾಲಯದಿಂದ ಕಮಿಷನರ್ ಶಶಿಕುಮಾರ್ ಸನ್ಮಾನಿಸಿದರು.

ರಿಕ್ಷಾ ಚಾಲಕನನ್ನು ಶ್ಲಾಘಿಸಿದ ಕಮೀಷನರ್: ಸಿಕ್ಕಿದ್ದ ಪರ್ಸ್‌ನ್ನು ಅದರ ಮಾಲಕರಿಗೆ ಮರಳಿಸಿದ ಘಟನೆಗೆ ಸಂಬಂಧಪಟ್ಟಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಆಟೊರಿಕ್ಷಾ ಚಾಲಕ ಮುಹಮ್ಮದ್ ಹನೀಫ್ ಎಂಬವರಿಗೆ ನಗರದ ಅತ್ತಾವರದ ಸಮೀಪ ದುಷ್ಯಂತ್ ಎಂಬವರು ಕಳೆದುಕೊಂಡಿದ್ದ ಪರ್ಸ್ ಸಿಗುತ್ತದೆ. ಅದನ್ನು ನೇರವಾಗಿ ಪೊಲೀಸ್ ಕಮೀಷನರ್ ಆಫೀಸ್‌ಗೆ ತರುತ್ತಾರೆ. ಸಿಕ್ಕಿದ್ದ ಪರ್ಸ್‌ನ್ನು ವಾಪಸ್ ಮಾಡುವ ಮೂಲಕ ಮುಹಮ್ಮದ್ ಹನೀಫ್ ಮಾನವೀಯತೆ ಮೆರೆದಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಸಾರ್ವಜನಿಕರು ಹಲವು ಸಂದರ್ಭಗಳಲ್ಲಿ ಆಟೊಚಾಲಕರ ವಿರುದ್ಧ ಆಪಾದಿಸುತ್ತಾರೆ. ಅಂತಹವರಲ್ಲಿ ತುಂಬ ಜನ ಪ್ರಾಮಾಣಿಕತೆಯಿಂದ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಹಮ್ಮದ್ ಹನೀಫ್ ಅವರ ಕಾರ್ಯವು ಮಾದರಿಯಾಗಿದೆ. ಸಮಾಜದಲ್ಲಿ ಇಂತಹ ಹೃದಯವಂತರ ಸಂಖ್ಯೆ ಹೆಚ್ಚಬೇಕು. ಪೊಲೀಸ್ ಇಲಾಖೆಯೊಂದಿಗೆ ರಿಕ್ಷಾ ಚಾಲಕರು ಸಹಕಾರ ನೀಡಬೇಕು ಎಂದು ಆಯುಕ್ತರು ಮನವಿ ಮಾಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News