ಉಡುಪಿ: ಹಿಂದೂ ಜಾಗರಣ ವೇದಿಕೆಯಿಂದ ದುರ್ಗಾ ದೌಡ್, ತಲವಾರು ಪ್ರದರ್ಶನ
ಉಡುಪಿ, ಅ.15: ಉಡುಪಿಯಲ್ಲಿ ಜಿಲ್ಲಾ ಹಿಂದೂ ಜಾಗರಣ ವೇದಿಕೆಯಿಂದ ಇಂದು ‘ದುರ್ಗಾ ದೌಡ್’ ನಡೆಯಿತು. ಸಂಘ ಪರಿವಾರದ ಕಾರ್ಯಕರ್ತರು ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ತಲವಾರು ಪ್ರದರ್ಶನದ ಮೆರವಣಿಗೆ ನಡೆಸಿದರು.
ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ನಗರದ ಅಂಬಲಪಾಡಿಯ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನ ದವರೆಗೆ ನಡೆಯಿತು. ಇಂಧನ ಸಚಿವ ಸುನಿಲ್ ಕುಮಾರ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಚಿವರ ಜೊತೆಗೆ ಶಾಸಕ ರಘುಪತಿ ಭಟ್ ಸೇರಿದಂತೆ ಇತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ವಿಜಯದಶಮಿ ಹಿನ್ನೆಲೆಯಲ್ಲಿ ನಡೆದ ದುರ್ಗಾ ದೌಡ್ ಮೆರವಣಿಗೆಯಲ್ಲಿ ಕಾರ್ಯಕರ್ತರು ತಲವಾರುಗಳನ್ನು, ಆಯುಧಗಳ ಪ್ರದರ್ಶನ ನಡೆಸಿದರು.
ಸಮಾಜವಾದ ಸಮಾಧಿ... ರಾಷ್ಟ್ರವಾದ ಜಾಗೃತ
ದುರ್ಗಾ ದೌಡ್ ಕಾರ್ಯಕ್ರಮದ ಸಮಾರೋಪ ನಗರದ ಅಂಬಲಪಾಡಿ ಮೈದಾನದಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್, ದೇಶದಲ್ಲಿ ಸೆಕ್ಯೂಲರೀಸಂ, ಸಮಾಜವಾದ ಸಮಾಧಿಯಾಗಿದೆ. ರಾಷ್ಟ್ರವಾದ ದೇಶದಲ್ಲಿ ಜಾಗೃತವಾಗಿದೆ. ಜನ ಜಾತ್ಯಾತೀತತೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಬುದ್ಧಿಜೀವಿಗಳು ಪ್ರಗತಿಪರರ ಹೆಸರಲ್ಲಿ ಕಾಲೇಜುಗಳ ಒಳಗೆ ಬದುಕುತಿದ್ದಾರೆ. ಸದ್ಯವೇ ದೇಶದಲ್ಲಿ, ರಾಜ್ಯದಲ್ಲಿ ಇವರ ಎಲ್ಲಾ ಆಟಾಟೋಪಗಳು ನಿಲ್ಲುತ್ತದೆ ಎಂದರು.
ಕಡಲತಡಿ ಕಬಳಿಸುವ ಯುದ್ಧ ‘ಲ್ಯಾಂಡ್ ಜಿಹಾದ್’ ನಡೆಯುತ್ತಿದೆ. ಹಿಂದೂ ಘೋಷಣೆ ಆಗದೆ ಆಚರಣೆ ಆಗಬೇಕು. ಧರ್ಮದ ರಕ್ಷಣೆಗೆ ಸಮಾಜ ಮೈ ಕೊಡವಿ ಎದ್ದು ನಿಲ್ಲಬೇಕು ಎಂದರು.
ಭಾರತವನ್ನು ತಾಲಿಬಾನ್ ಮಾಡುವ ಕನಸನ್ನು ಕೆಲವರು ಕಾಣುತ್ತಿದ್ದಾರೆ. ಕರಾವಳಿಯಲ್ಲಿ ತಾಲಿಬಾನ್ ರಿಕ್ರೂಟ್ಮೆಂಟ್ ಮಾಡಲಾಗುತ್ತಿದೆ. ಐಸಿಸ್ ಕೊಂಡಿ ಉಳ್ಳಾಲದಲ್ಲಿದೆ. ಹಿಂಜಾವೇ ಇದ್ದಲ್ಲಿ ತಾಲಿಬಾನಿಗಳ ಆಟ ನಡೆಯೋದಿಲ್ಲ. ವಿಶ್ವದ ಶತ್ರುಗಳ ಟಾರ್ಗೆಟ್ ಭಾರತ ದೇಶ. ಭಾರತವನ್ನು ಒಳಗೊಳಗೆ ಕೊಲ್ಲಲಾಗುತ್ತಿದೆ. ರೈತರ ಹೆಸರನ್ನು ಬಳಸಿ ಶತ್ರುಗಳ ಷಡ್ಯಂತ್ರದ ಪರಾಕಾಷ್ಠೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ, ಕರ್ನಾಟಕ ರಾಜ್ಯ ಪ್ರಚಾರ ಪ್ರಮುಖ್ ಅರವಿಂದ ಕೋಟೇಶ್ವರ, ಪ್ರಾಂತ ಉಪಾಧ್ಯಕ್ಷ ಕಿಶೋರ್ ಕುಮಾರ್ ಮಂಗಳೂರು, ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ, ವಿಭಾಗ ಕಾರ್ಯದರ್ಶಿ ಚಿನ್ಮಯ ಕುಮಾರ್ ಈಶ್ವರ ಮಂಗಲ, ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಬೈಲೂರು ಉಪಸ್ಥಿತರಿದ್ದರು.
ಹಿಂಜಾವೇ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಸ್ವಾಗತಿಸಿದರು. ಎನ್.ಆರ್. ದಾಮೋದರ ಶರ್ಮಾ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಕಲ್ಲೊಟ್ಟೆ ವಂದಿಸಿದರು.