ಐಎಫ್ಎಫ್ ವತಿಯಿಂದ ಅಕಾಡಮಿಕ್ ಎಕ್ಸಲೆನ್ಸ್ ಅವಾರ್ಡ್

Update: 2021-10-15 16:39 GMT

ದಮಾಮ್ : ಇಂಡಿಯಾ ಫ್ರೆಟರ್ನಿಟಿ ಫೋರಂ ವತಿಯಿಂದ 'ಅಕಾಡಮಿಕ್ ಎಕ್ಸಲೆನ್ಸ್ ಅವಾರ್ಡ್ - 2021' ವೆಬಿನಾರ್ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.  2021-22ನೆ ಸಾಲಿನಲ್ಲಿ ಪೂರ್ವ ಪ್ರಾಂತ್ಯದಾದ್ಯಂತ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಭಾರತೀಯ ರಾಯಭಾರಿ‌ ಕಚೇರಿಯ ಅಧಿಕಾರಿಗಳು, ವಿವಿಧ ಶಾಲಾ ಪ್ರಾಂಶುಪಾಲರು, ವಾಣಿಜ್ಯ ಹಾಗೂ ಸೇವಾ ಕ್ಷೇತ್ರಗಳಲ್ಲಿರುವ ಪ್ರಮುಖ ಭಾರತೀಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ದ್ವಿತೀಯ ಕಾರ್ಯದರ್ಶಿ (ಆರ್ಥಿಕ, ವಾಣಿಜ್ಯ ಮತ್ತು ಶಾಲಾ ವೀಕ್ಷಕರು) ಆಸಿಂ ಅನ್ವರ್ ವೆಬಿನಾರನ್ನು ಉದ್ಘಾಟಿಸಿದರು. ವೆಬಿನಾರ್ ನಲ್ಲಿ  ಫೋರಂನ ಚಟುವಟಿಕೆ ಕುರಿತ ಚಿತ್ರ ಮತ್ತು ಈ ಸಮಾರಂಭದ ಭಾಗವಾಗಿ ಐ.ಎಫ್.ಎಫ್ ಕಾರ್ಯಕರ್ತರು ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿದ, ಪ್ರಾಂಶುಪಾಲರು ಹಾಗೂ  ರ‍್ಯಾಂಕ್ ವಿದ್ಯಾರ್ಥಿಗಳ ಹೇಳಿಕೆಗಳನ್ನು ಹೊಂದಿದ ವೀಡಿಯೊ ತುಣುಕುಗಳನ್ನು ಪ್ರಸಾರ ಮಾಡಲಾಯಿತು.

ಸಮುದಾಯ ನಾಯಕರು ಮತ್ತು ಶಾಲಾ ಪ್ರಾಂಶುಪಾಲರು‌ ಈ ಸಂದರ್ಭದಲ್ಲಿ ಮಾತನಾಡಿದರು. ಎಲ್ಲಾ ಭಾಷಣಕಾರರು ತಮ್ಮ ಭಾಷಣಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದರು. ಕೋವಿಡ್ 19 ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಫೋರಮ್ ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಐಐಎಸ್ ದಮಾಮ್‌ ನ  ಪ್ರಾಂಶುಪಾಲೆ ಮೆಹನಾಝ್ ಫರೀದ್,  ಐಐಎಸ್ ಜುಬೈಲ್ ಪ್ರಾಂಶುಪಾಲ ಡಾ. ನೌಶಾದ್ ಅಲಿ,  ಅಲ್ ಮುನಾ ಐಎಸ್ ದಮಾಮ್ ಪ್ರಾಂಶುಪಾಲ ಮಮ್ಮೂ ಮಾಸ್ಟರ್ ಕೆಪಿ, ಡ್ಯೂನ್ಸ್ ಐಎಸ್ ಖೋಬರ್ ಇದರ ಪ್ರಾಂಶುಪಾಲೆ ಸುಮಯ್ಯಾ ಮುಹಮ್ಮದ್ ಆರಿಫ್, ಜುಬೈಲ್‌ ಅಲ್ ಮಾನ ಆಸ್ಪತ್ರೆಯ ಅನಸ್ತೇಶಿಯಾ ವಿಭಾಗದ ಮುಖ್ಯಸ್ಥ ಡಾ. ಇರ್ಫಾನ್ ಹಮೀದ್ ಖಾನ್ (ಐಐಎಸ್ ಜುಬೈಲ್ ಮ್ಯಾನೇಜಿಂಗ್ ಕಮಿಟಿ ಚೆಯರ್ಮ್ಯಾನ್), ಖೋಬರ್ ನ ಕಿಂಗ್ ಫಹದ್ ಆಸ್ಪತ್ರೆಯ ಕಾರ್ಡಿಯಾಕ್ ಸರ್ಜನ್ ಫಯಾಝ್ ಅಹ್ಮದ್ (ಕರ್ನಾಟಕ) ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ರಾಯಭಾರಿ ಕಚೇರಿಯ ದ್ವಿತೀಯ ಕಾರ್ಯದರ್ಶಿ ಆಸಿಂ ಅನ್ವರ್,  ಕೋವಿಡ್ 19 ನಿಮಿತ್ತ ಅಂತಿಮ ಬೋರ್ಡ್ ಪರೀಕ್ಷೇಗಳು ನಡೆದಿಲ್ಲದಿದ್ದರೂ ಧೈರ್ಯಗುಂದದಂತೆ ವಿದ್ಯಾರ್ಥಿಗಳಿಗೆ ಸಲಹೆಯಿತ್ತರು. 

ಇಂಡಿಯಾ ಫ್ರೆಟರ್ನಿಟಿ ಫೋರಂ ಪೂರ್ವ ಪ್ರಾಂತ್ಯ ಕಾರ್ಯದರ್ಶಿ ಅಬ್ದುಲ್ ಸಲಾಂ ಮಾತನಾಡಿ,  ಭವಿಷ್ಯದಲ್ಲಿ ರಾಷ್ಟ್ರವನ್ನು ಕಟ್ಟಲಿರುವ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಫೋರಂ ನಡೆಸಿದ ಹಲವು ಚಟುವಟಿಕೆಗಳಿಗೆ ಸಮಾರೋಪವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಭವಿಷ್ಯದ ಪ್ರಯತ್ನಗಳಿಗಾಗಿ ಸಮುದಾಯ ನಾಯಕರು ಐ.ಎಫ್.ಎಫ್ ಗೆ ಸಲಹೆಗಳನ್ನು ನೀಡಬೇಕು ಎಂದು ಅವರು ತಿಳಿಸಿದರು.

ಫೋರಂನ ಕಾರ್ಯನಿರ್ವಹಣಾ ಸದಸ್ಯ ಮೀರಾಜ್ ವೆಬಿನಾರ್ ಕಾರ್ಯಕ್ರಮಕ್ಕೆ ಉಪಾಂತ್ಯವನ್ನು ನೀಡಿದರು. ಸುಮಾರು 300 ಮಂದಿ ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದರು. ಫ್ರೆಟರ್ನಿಟಿಯ ಕರ್ನಾಟಕ ಪ್ರತಿನಿಧಿ  ಆಶಿಕ್ ಮಾಚಾರ್ ಕಾರ್ಯಕ್ರಮ ನಿರೂಪಿಸಿದರು.

ಸೌದಿ ಅರೇಬಿಯಾದಲ್ಲಿ ರಾಯಭಾರಿ‌ ಕಚೇರಿ ನೆರವಿನೊಂದಿಗೆ ಹಲವು ಚಟುವಟಿಕೆಗಳನ್ನು ನಡೆಸುತ್ತಿರುವ ಪ್ರಮುಖ ಭಾರತೀಯ ಸಾಮಾಜಿಕ ಸಂಘಟನೆ ಐಎಫ್ಎಫ್ ಆಗಿದೆ. ಹಲವು ಕಾರ್ಯಕ್ರಮಗಳು ಮತ್ತು ವೆಬಿನಾರ್ ಮೂಲಕ ಸೌದಿ ಅರೇಬಿಯಾದಲ್ಲಿ ಜೀವಿಸುತ್ತಿರುವ ಅನಿವಾಸಿಗಳ ಸಾಮಾಜಿಕ ಅಭಿವೃದ್ಧಿಗೆ ವೇದಿಕೆಯನ್ನು ಅದು ಒದಗಿಸುತ್ತಾ ಬಂದಿದೆ. ಅದರ ಸಾಮಾಜಿಕ ಸೇವೆಗಳು ವಿವಿಧ ಹಂತಗಳಲ್ಲಿ ಭಾರತೀಯ ಅನಿವಾಸಿಗಳನ್ನು ನೆರವಾಗುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News