ಯೆಮನ್ ನ ಮಾನವೀಯ ಬಿಕ್ಕಟ್ಟು ಉಲ್ಬಣ: ವಿಶ್ವಸಂಸ್ಥೆ ಎಚ್ಚರಿಕೆ

Update: 2021-10-15 17:15 GMT

ವಿಶ್ವಸಂಸ್ಥೆ, ಅ.15: ಯೆಮನ್ನ ಅರ್ಥವ್ಯವಸ್ಥೆ ಪತನದ ಅಂಚಿನಲ್ಲಿದೆ, ಅಲ್ಲಿನ ಮಾನವೀಯ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದ್ದು ಅರಬ್ ಜಗತ್ತಿನ ಅತ್ಯಂತ ಬಡರಾಷ್ಟ್ರದ ಸಂಘರ್ಷ ಇನ್ನಷ್ಟು ಹಿಂಸಾತ್ಮಕ ರೂಪ ಪಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ವಿಭಾಗದ ಉಪ ಪ್ರಧಾನ ಕಾರ್ಯದರ್ಶಿ ರಮೇಶ್ ರಾಜಸಿಂಘಮ್ ಹೇಳಿದ್ದಾರೆ. ಗುರುವಾರ ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಯೆಮಾನ್ ಜನಸಂಖ್ಯೆಯ ಮೂರನೇ ಎರಡರಷ್ಟು, ಅಂದರೆ 20 ಮಿಲಿಯನ್ಗೂ ಅಧಿಕ ಜನರಿಗೆ ಮಾನವೀಯ ನೆರವಿನ ಅಗತ್ಯವಿದೆ. ಆದರೆ ನೆರವು ನೀಡುವ ಸಂಘಟನೆಗಳಿಗೆ ಮತ್ತೊಮ್ಮೆ ಹಣಕಾಸಿನ ಕೊರತೆ ಎದುರಾಗಿದೆ ಎಂದರು.

   
ಯೆಮನ್ನ ಸುಮಾರು 12 ಮಿಲಿಯನ್ ಜನತೆಗೆ ನೆರವು ಸಂಸ್ಥೆಗಳು ಸಹಾಯ ಒದಗಿಸುತ್ತಿದ್ದು ಕೆಲ ತಿಂಗಳ ಹಿಂದೆ ಈ ಪ್ರಮಾಣ ಸುಮಾರು 9 ಮಿಲಿಯನ್ ಆಗಿತ್ತು. ಈ ಹೆಚ್ಚುವರಿ ನೆರವು ಭಾರೀ ಕ್ಷಾಮದ ತಕ್ಷಣದ ಅಪಾಯವನ್ನು ಗಣನೀಯವಾಗಿ ಕಡಿಮೆಗೊಳಿಸಿತು ಎಂದ ಅವರು, ಆದರೆ ಇದೇ ಪ್ರಮಾಣದಲ್ಲಿ ನೆರವು ಮುಂದುವರಿಸಲು ಸಂಘಟನೆಗಳಿಗೆ ಹಣಕಾಸಿನ ತೀವ್ರ ಮುಗ್ಗಟ್ಟು ಎದುರಾಗಿದೆ. ಮುಂದಿನ ವಾರ ಮತ್ತು ತಿಂಗಳುಗಳಲ್ಲಿ ಸುಮಾರು 4 ಮಿಲಿಯನ್ ಜನರಿಗೆ ಒದಗಿಸುವ ಆಹಾರದ ನೆರವು ಕಡಿತಗೊಳ್ಳಬಹುದು. ಈ ವರ್ಷಾಂತ್ಯಕ್ಕೆ ಈ ಪ್ರಮಾಣ 5 ಮಿಲಿಯನ್ಗೆ ಹೆಚ್ಚಬಹುದು ಎಂದು ಎಚ್ಚರಿಸಿದ್ದಾರೆ. ಕಳೆದ ಹಲವು ತಿಂಗಳುಗಳಲ್ಲಿ ಕ್ಷಾಮದ ಅಪಾಯವನ್ನು ದೂರವಿರಿಸಲು ನಾವು ಮಾಡಿರುವ ಉಪಕ್ರಮಗಳ ವೇಗವನ್ನು ಉಳಿಸಿಕೊಳ್ಳಲು ಸಾಧ್ಯವಿರುವುದನ್ನು ಮಾಡಬೇಕೆಂದು ಪ್ರತಿಯೊಬ್ಬರಲ್ಲೂ ವಿನಂತಿ ಮಾಡುತ್ತೇವೆ ಎಂದು ರಮೇಶ್ ರಾಜಸಿಂಘಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News