ಮಂಗಳೂರು ದಸರಾ, ನವರಾತ್ರಿ ಉತ್ಸವ ಸಮಾರೋಪದ ಕ್ಷಣಗಣನೆ

Update: 2021-10-15 18:26 GMT

ಮಂಗಳೂರು, ಅ.15: ನಗರದ ಕುದ್ರೋಳಿ ಶ್ರೀಗೋಕರ್ಣ ನಾಥ ಕ್ಷೇತ್ರದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲ್ಪಟ್ಟ ನವದುರ್ಗೆ, ಶೃಂಗರಿಸಲ್ಪಟ್ಟ ಶ್ರೀಶಾರದಾ ದೇವಿಯ ವಿಗ್ರಹಗಳಿಗೆ ಮಹಾಪೂಜೆಯೊಂದಿಗೆ ಉತ್ಸವ ಸಮಾಪನದ ಕ್ಷಣಗಣನೆ ಆರಂಭಗೊಂಡಿದೆ.

ಈ ಬಾರಿ ಕೊರೋನ ನಿಯಮಾವಳಿಯ ಹಿನ್ನೆಲೆಯಲ್ಲಿ ಮಂಗಳೂರು ದಸರಾ ಮೆರವಣಿಗೆ ನಗರದಲ್ಲಿ ನಡೆಸದಿರಲು ಉತ್ಸವ ಸಮಿತಿ ತೀರ್ಮಾನಿಸಿತ್ತು. ಶ್ರೀಕ್ಷೇತ್ರ ಕುದ್ರೋಳಿಯ ಗೋಕರ್ಣನಾಥ ದೇವಾಲದ ಆವರಣದಲ್ಲಿ ಉತ್ಸವದ ಬಲಿ ನಡೆದು ದೇವಳದ ಪುಷ್ಕರಣಿಯಲ್ಲಿ ಉತ್ಸವ ಮೂರ್ತಿಗಳ ವಿಸರ್ಜನೆ ನಡೆಯಲಿದೆ.

ಮಹಾಗಣಪತಿ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹಗಳು ಹಾಗೂ ನವದುರ್ಗೆಯ ವಿಗ್ರಹಗಳಿಗೆ ಪೂಜಾ ವಿಧಿಗಳೊಂದಿಗೆ ಉತ್ಸವದ ಅಂತಿಮ ಕ್ಷಣಗಣನೆ ಆರಂಭಗೊಂಡಿದೆ. ಇದರೊಂದಿಗೆ ಮಂಗಳೂರು ದಸರಾ ಮತ್ತು ನವರಾತ್ರಿ ಉತ್ಸವಕ್ಕೆ ತೆರೆ ಎಳೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಶನಿವಾರ ಕುದ್ರೋಳಿ ಕ್ಷೇತ್ರದಲ್ಲಿ ನಡೆಯುವ ಭಜನೆ ಹಾಗೂ ಗುರುಪೂಜೆಯೊಂದಿಗೆ ಈ ಬಾರಿಯ ಉತ್ಸವದ ಅಂತಿಮ ವಿಧಿ ಸಮಾಪನಗೊಳ್ಳಲಿದೆ.

ಮಾಜಿ ಕೇಂದ್ರ ವಿತ್ತ ಸಚಿವ ಹಾಗೂ ಶ್ರೀಕ್ಷೇತ್ರ ಕುದ್ರೋಳಿಯ ನವೀಕರಣದ ರೂವಾರಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ದಸರಾ ಉತ್ಸವದ ಅಂತಿಮ ಮಹಾ ಪೂಜೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉತ್ಸವದ ಅಂತಿಮ ಕ್ಷಣದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕುದ್ರೋಳಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್. ಸಾಯಿ ರಾಮ್, ಆಡಳಿತ ಸಮಿತಿಯ ಪದಾಧಿಕಾರಿಗಳಾದ ಬಿ.ಮಾದವ ಸುವರ್ಣ, ಪದ್ಮರಾಜ್, ರವಿಶಂಕರ ಮಿಜಾರ್, ಕೆ.ಮಹೇಶ್ ಚಂದ್ರಶೇಖರ ಪೂಜಾರಿ, ಸಂತೋಷ್ ಕುಮಾರ್, ಜಗದೀಶ್ ಡಿ. ಸುವರ್ಣ, ಊರ್ಮಿಳಾ ರಮೇಶ್, ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷೆ ಅನಸೂಯಾ ಬಿ.ಟಿ. ಸಾಲ್ಯಾನ್, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ ಹಾಗೂ ಸಮಿತಿಯ ಪದಾಧಿಕಾರಿಗಳು, ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಮತ್ತಿತರರು ಉಪಸ್ಥಿತರಿದ್ದರು.

ನಗರದಲ್ಲಿ ಈ ಬಾರಿ ಮಹಾನಗರ ಪಾಲಿಕೆಯ ವತಿಯಿಂದ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವಕ್ಕೆ ತೆರೆ: ಐತಿಹಾಸಿಕ ಶ್ರೀಮಂಗಳಾದೇವಿ ದೇವಸ್ಥಾನ, ಬೋಳಾರ ಹಳೆ ಕೋಟೆ ಮಾರಿಯಮ್ಮನ ಗುಡಿ, ಊರ್ವ ಮಾರಿಯಮ್ಮನ ಗುಡಿ, ಕಟೀಲು ಶ್ರೀದುರ್ಗಾ ಪರಮೇಶ್ವರಿ ಕ್ಷೇತ್ರ, ಪೊಳಲಿ ಶ್ರೀರಾಜ ರಾಜೇಶ್ವರಿ ಕ್ಷೇತ್ರ, ಶ್ರೀಬಪ್ಪನಾಡು ದುರ್ಗಾ ಪರಮೇಶ್ವರಿ ಕ್ಷೇತ್ರ ಹಾಗೂ ವಿವಿಧ ಕಡೆಗಳಲ್ಲಿ ನವರಾತ್ರಿ ಉತ್ಸವದ ಸಮಾಪನವು ಧಾರ್ಮಿಕ ವಿಧಿಗಳೊಂದಿಗೆ ದಸರಾ ಉತ್ಸವದ ಕ್ಷಣಗಣನೆ ಆರಂಭಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News