ಹಿರಿಯ ಸಹೋದ್ಯೋಗಿಯಿಂದ ಏಮ್ಸ್ ವೈದ್ಯೆ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Update: 2021-10-16 04:06 GMT

ಹೊಸದಿಲ್ಲಿ: ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಯ ಕ್ಯಾಂಪಸ್‌ನಲ್ಲಿ ನಡೆದ ಬರ್ತ್‌ಡೇ ಪಾರ್ಟಿಯಲ್ಲಿ ಹಿರಿಯ ಸಹೋದ್ಯೋಗಿಯೊಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಏಮ್ಸ್ ವೈದ್ಯೆಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ವಿವಾಹಿತ ವ್ಯಕ್ತಿಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ. ಈ ಘಟನೆ ಸಂತ್ರಸ್ತೆ ವೈದ್ಯೆಯ ಸಹೋದ್ಯೋಗಿಯೊಬ್ಬರ ಹುಟ್ಟುಹಬ್ಬದ ಕೂಟದಲ್ಲಿ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಅಕ್ಟೋಬರ್ 11ರಂದು ಮಾಹಿತಿ ಲಭ್ಯವಾಗಿದ್ದು, ವೈದ್ಯಕೀಯ- ಕಾನೂನು ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಆರೋಪಿ ಏಮ್ಸ್ ವಸತಿ ಸಂಕೀರ್ಣದಲ್ಲಿ ವಾಸವಿದ್ದ. ಘಟನೆ ನಡೆದ ದಿನದಂದು ಸಂತ್ರಸ್ತೆ ವೈದ್ಯೆ ಹಾಗೂ ಸಹೋದ್ಯೋಗಿಗಳು ಮದ್ಯಪಾನ ಮಾಡಿ ರಾತ್ರಿ ಅಲ್ಲೇ ಉಳಿದಿದ್ದರು. ಆ ಬಳಿಕ ಆರೋಪಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಲಾಗಿದೆ.

ವೈದ್ಯೆಯ ಹೇಳಿಕೆ ಆಧಾರದಲ್ಲಿ ಭಾರತೀಯ ದಂಡಸಂಹಿತೆ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು 377 (ಅಸಹಜ ಅಪರಾಧಗಳು) ಅನ್ವಯ ಹೌಜ್ ಖಾಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಬೆನಿಟಾ ಮೇರಿ ಜೈಕರ್ ಹೇಳಿದ್ದಾರೆ.

ತನಿಖೆ ವೇಳೆ ಅಪರಾಧ ದಂಡಸಂಹಿತೆ ಸೆಕ್ಷನ್ 164ರ ಅನ್ವಯ ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟರ ಮುಂದೆ ದಾಖಲಿಸಲಾಗಿದೆ. ಆರೋಪಿ ಪತ್ತೆಗಾಗಿ ಹಲವು ಅಡಗುದಾಣಗಳ ಮೇಲೆ ದಾಳಿ ನಡೆಸಿದ್ದರೂ, ಆರೋಪಿಯ ಸುಳಿವು ಪತ್ತೆಯಾಗಿಲ್ಲ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News