2023ರ ವರೆಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

Update: 2021-10-16 14:05 GMT

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಲ್ಲಿ ಅತ್ಯಂತ ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತದ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಯುಎಇನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ನಂತರ ಭಾರತೀಯ ಸೀನಿಯರ್ ಕ್ರಿಕೆಟ್ ತಂಡದ ಕೋಚ್ ಆಗಲು ಒಪ್ಪಿಕೊಂಡಿದ್ದಾರೆ  ಎಂದು ವರದಿಯಾಗಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹಾಗೂ  ಕಾರ್ಯದರ್ಶಿ ಜಯ್ ಶಾ  ಅವರು ದುಬೈನಲ್ಲಿ ನಡೆದಿದ್ದ  ಐಪಿಎಲ್  ಫೈನಲ್ ಪಂದ್ಯದ ವೇಳೆ ದ್ರಾವಿಡ್ ಅವರನ್ನು ಭೇಟಿಯಾಗಿ ಯುಎಇಯಲ್ಲಿ ಟಿ 20 ವಿಶ್ವಕಪ್ ಮುಗಿದ ನಂತರ ಭಾರತ ಕ್ರಿಕೆಟ್ ತಂಡದ ಕೋಚ್ ಆಗುವಂತೆ ಮನವೊಲಿಸಿದರು ಎಂದು  Times of india ವರದಿ ಮಾಡಿದೆ.

"ದ್ರಾವಿಡ್ ಅವರು ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗುವುದನ್ನು ದೃಢ ಪಡಿಸಿದ್ದಾರೆ. ದ್ರಾವಿಡ್ ಅವರು ಶೀಘ್ರದಲ್ಲೇ ಎನ್‌ಸಿಎ ಮುಖ್ಯಸ್ಥ ಹುದ್ದೆಯನ್ನು ತ್ಯಜಿಸಲಿದ್ದಾರೆ.’’ ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಐಪಿಎಲ್ ಫೈನಲ್ ಪಂದ್ಯ ಮುಗಿದ ಬಳಿಕ ಶುಕ್ರವಾರ ರಾತ್ರಿ Times of indiaಗೆ ತಿಳಿಸಿದರು.

ಅಕ್ಟೋಬರ್ 12 ರಂದು Times of india ವರದಿ ಮಾಡಿದಂತೆ ದ್ರಾವಿಡ್ ಅವರ ಆಪ್ತ  ಪರಾಸ್  ಮಾಂಬ್ರೆ ಅವರನ್ನು ಬೌಲಿಂಗ್ ತರಬೇತುದಾರರನ್ನಾಗಿ ನೇಮಿಸಲಾಗುವುದು ಎಂದು ತಿಳಿದುಬಂದಿದೆ. ವಿಕ್ರಮ್ ರಾಥೋರ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ.

ದ್ರಾವಿಡ್ ಗೆ ಎರಡು ವರ್ಷಗಳ ಗುತ್ತಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ದ್ರಾವಿಡ್ 10 ಕೋಟಿ ರೂ. ಸಂಬಳ ಪಡೆಯಲಿದ್ದಾರೆ. ಕಳೆದ ತಿಂಗಳು ಅವರನ್ನು ಎನ್‌ಸಿಎ ಮುಖ್ಯಸ್ಥರಾಗಿ ಮರು ನೇಮಕ ಮಾಡಲಾಯಿತು. ದ್ರಾವಿಡ್  ಅವರು ವಿಶ್ವಕಪ್ ನಂತರ ನ್ಯೂಝಿಲ್ಯಾಂಡ್ ಸರಣಿಯ ವೇಳೆ ಕೋಚ್ ಹುದ್ದೆ ವಹಿಸಿಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News