ಕ್ರೈಸ್ತ ಸಮುದಾಯ ವಿರುದ್ಧ ಬಿಜೆಪಿ ಷಡ್ಯಂತ್ರ: ಜೆ.ಆರ್. ಲೋಬೋ ಆರೋಪ

Update: 2021-10-16 09:52 GMT

ಮಂಗಳೂರು, ಅ.16: ಮತಾಂತರದ ಹೆಸರಿನಲ್ಲಿ ಬಿಜೆಪಿಯು ಕ್ರೈಸ್ತ ಸಮುದಾಯ ವನ್ನು ತನ್ನ ರಾಜಕೀಯ ಷಡ್ಯಂತ್ರಕ್ಕೆ ಸಾಫ್ಟ್ ಟಾರ್ಗೆಟ್ ಆಗಿ ಬಳಕೆ ಮಾಡುತ್ತಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕರ್ನಾಟಕ ವಿಧಾನ ಮಂಡಲದ ಸದನದ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ತನ್ನ ಇತ್ತೀಚಿನ ಸಮಿತಿ ಸಭೆಯಲ್ಲಿ ರಾಜ್ಯದ ಕ್ರೈಸ್ತ ಸಮುದಾಯ ಮಿಷಿನರಿಗಳು ಹಾಗೂ ಸಂಸ್ಥೆಗಳು ನಡೆಸುವ ಚಟುವಟಿಕೆಗಳ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದು ಹಾಗೂ ರವಿವಾರ ಸಮಿತಿ ಸದಸ್ಯರು ಚರ್ಚ್‌ಗಳಿಗೆ ಭೇಟಿ ನೀಡಬೇಕೆಂಬ ಹೇಳಿಕೆಯು ಈ ಟಾರ್ಗೆಟ್‌ನ ಭಾಗವಾಗಿದೆ ಎಂದರು.

ಕ್ರೈಸ್ತ ಸಮುದಾಯ ಮೇಲಿನ ಬೇಹುಗಾರಿಕೆಯ ಸಮಿತಿಯ ಈ ತೀರ್ಮಾನ ಅದರ ಅಧಿಕಾರ ವ್ಯಾಪ್ತಿಗೆ ಮೀರಿದ್ದಾಗಿದೆ. ಸಮಿತಿಯು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭಿವೃದ್ದಿ ಬಗ್ಗೆ ಚಿಂತನೆ ನಡೆಸಬೇಕೇ ಹೊರತು ಇಂತಹ ಕೃತ್ಯಗಳನ್ನು ನಡೆಸುವುದಲ್ಲ ಎಂದವರು ಹೇಳಿದರು.

ಬಿಜೆಪಿಯು ನಿರಂತರವಾಗಿ ಕ್ರೈಸ್ತ ಸಮುದಾಯದ ಮೇಲೆ ಮತಾಂತರದ ಆರೋಪವನ್ನು ಮಾಡುತ್ತಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಬಲವಂತದ ಮತಾಂತರ ಯಾರನ್ನೂ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅಂತಹದ್ದು ಆಗುತ್ತಿದೆ ಎಂದಾದರೆ ಅದಕ್ಕೆ ಅಗತ್ಯವಾದ ಕಾನೂನುಗಳಿವೆ. ಅದಕ್ಕೆ ಹೊರತಾಗಿ ಈ ರೀತಿಯ ಮಾಡುವುದು ಒಡೆದು ಆಳುವ ನೀತಿಯಾಗಿದೆ. ಕ್ರೈಸ್ತ ಸಮುದಾಯ ಶಿಕ್ಷಣ, ವೈದ್ಯಕೀಯ ಹಾಗೂ ಸಮಾಜ ಸೇವಾ ಕ್ಷೇತ್ರಗಳ ಫಲಾನುಭವಿಗಳನ್ನು ಮತಾಂತರ ಮಾಡಲಾಗಿದ್ದರೆ ಇಡೀ ದೇಶದಲ್ಲಿ ಶೇ. 70ರಷ್ಟು ಮಂದಿ ಕ್ರೈಸ್ತ ಧರ್ಮೀಯರಿರಬೇಕಿತ್ತು. ಆದರೆ ದ.ಕ. ಜಿಲ್ಲೆಯಲ್ಲಿರುವುದು ಶೇ. 12ರಷ್ಟು, ರಾಜ್ಯದಲ್ಲಿ ಶೇ. 2.5 ಆಗಿದ್ದರೆ, ದೇಶದಲ್ಲಿ ಕೇವಲ 3.5ರಷ್ಟು ಕ್ರೈಸ್ತ ಧರ್ಮದವರಿದ್ದಾರೆ. ರಾಜರು, ಬ್ರಿಟಿಷರು, ಪೋರ್ಚುಗೀಸರು ಇದ್ದಾಗಲೇ ಈ ಧರ್ಮ ದೇಶದಲ್ಲಿ. ಹಾಗಿರುವಾಗ ಸೌಮ್ಯ ಸ್ವಭಾವದ ಕ್ರೈಸ್ತ ಸಮುದಾಯ ಮೇಲೆ ಇಂತಹ ಆರೋಪಗಳು ಸರಿಯಲ್ಲ ಎಂದವರು ಹೇಳಿದರು.

ರವಿವಾರ ಚರ್ಚ್‌ಗಳಿಗೆ ಸಮಿತಿಯ ಸದಸ್ಯರು ಭೇಟಿ ನೀಡಬೇಕೆಂಬ ಹೇಳಿಕೆ ಒಳ್ಳೆಯದು. ಚರ್ಚ್‌ ಎಲ್ಲ ಜನರಿಗೆ ಜಾತಿ ಮತ ಬೇಧವಿಲ್ಲದೆ ತೆರೆಯಲಾಗುತ್ತದೆ. ಒಳ್ಳೆಯ ಉದ್ದೇಶದಿಂದ ಭೇಟಿ ಕೊಡಿ. ದುರುದ್ದೇಶದಿಂದ ಕೂಡಿದ್ದರೆ ದೇವರೇ ನೀಡಲಿದ್ದಾರೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶಾಹುಲ್ ಹಮೀದ್, ಪ್ರಕಾಶ್ ಸಾಲಿಯಾನ್, ವಿಶ್ವಾಸ್ ಕುಮಾರ್‌ದಾಸ್, ಟಿ.ಕೆ. ಸುಧೀರ್, ಜೋಕಿಂ, ರಮಾನಂದ ಪೂಜಾರಿ, ಸಲೀಂ, ಸುಬೋದ್ ಆಳ್ವ, ಚಂದ್ರಕಲಾ, ಶಾಂತಲಾ ಗಟ್ಟಿ, ಸುಹಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News