'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮ ಸದುಪಯೋಗವಾಗಲಿ: ಅಂಗಾರ

Update: 2021-10-16 14:54 GMT

ಮಂಗಳೂರು, ಅ.16: ಗ್ರಾಮಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಕಚೇರಿಗೆ ಅಲೆದಾಡುವು ದನ್ನು ತಪ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾಧಿಕಾರಿ ನಡೆಹಳ್ಳಿಯ ಕಡೆ ಕಾರ್ಯಕ್ರಮದ ಸದುಪಯೋಗ ಪಡೆದು ಕೊಳ್ಳುವಂತೆ ಬಂದರು, ಒಳನಾಡು ಜಲಸಾರಿಗೆ ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಕರೆ ನೀಡಿದರು.

ಶನಿವಾರ ಸುಳ್ಳ ತಾಲೂಕಿನ ಅಮರ ಮುಡ್ನೂರು ಹಾಗೂ ಅಮರ ಪಡ್ನೂರು ಗ್ರಾಪಂ ವ್ಯಾಪ್ತಿಯಲ್ಲಿನ ಗ್ರಾಮಸ್ಥರ ಅಹವಾಲು ಆಲಿಸಲು ಹಾಗೂ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿಕೊಡಲು ಕುಕ್ಕುಜಡ್ಕದ ಕೃಷಿಪತ್ತಿನ ಪ್ರಾಥಮಿಕ ಸಹಕಾರಿ ಸಂಘದ ಅಮರ ಸಹಕಾರಿ ಸಭಾಭವನದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಮೂಲಕ ಜನರ ಅಹವಾಲುಗಳನ್ನು ಆಲಿಸುವ ಉದ್ದೇಶದಿಂದ ಸರಕಾರ ಈ ಕಾರ್ಯಕ್ರಮಕ್ಕೆ ಪುನಃ ಚಾಲನೆ ನೀಡಿದೆ. ಅದರಂತೆ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಲ್ಪಿಸಿ ಕೊಡಲಿದ್ದಾರೆ. ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದವರು ಹೇಳಿದರು.

ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಕೂಡಲೇ ಮುಖ್ಯಮಂತ್ರಿಯೊಂದಿಗೆ ಬೆಂಗಳೂರಿನಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ ಕರೆಯಲಾಗುವುದು. ಸುಳ್ಯಕ್ಕೆ 110 ಕೆ.ವಿ. ಸಬ್‌ಸ್ಟೇಷನ್, ಅರಣ್ಯ ಹಕ್ಕುಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಲಾಗುವುದು. ಕಾನ, ಬಾಣೆ, ಕುಮ್ಕಿ ಹಕ್ಕು ಮಂಜೂರು ಮಾಡುವ ಕುರಿತಂತೆ ಸೋಮವಾರ ಕಂದಾಯ ಸಚಿವ ಅಶೋಕ್ ಜೊತೆ ಮಾತುಕತೆ ನಡೆಸಲಾಗುವುದು. ಕಾನ, ಬಾಣೆ, ಕುಮ್ಕಿ ಹಕ್ಕು ನೀಡುವಂತೆ ಡಾ.ವಿ.ಎಸ್. ಆಚಾರ್ಯ ಸಚಿವರಾಗಿದ್ದಾಗ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಬಳಿಕ ನಾನಾ ಕಾರಣಕ್ಕೆ ಅನುಷ್ಠಾನಗೊಂಡಿರಲಿಲ್ಲ ಎಂದರು.

ಸುಳ್ಯ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅಡಕೆಗೆ ಹಳದಿ ಎಲೆ ರೋಗ ಬಾಧಿಸುತ್ತದೆ. ಇದರ ಅಧ್ಯಯನ ಹಾಗೂ ನಿವಾರಣೆಗೆ ರಾಜ್ಯ ಸರಕಾರ ಕಳೆದ ಬಜೆಟ್‌ನಲ್ಲಿ 25 ಕೋಟಿ ರೂ.ನ್ನು ಮೀಸಲಿರಿಸಿದೆ. ಈ ಮೊತ್ತವನ್ನು ವಿನಿಯೋಗ ಮಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಕರಾವಳಿ ಮಾತ್ರವಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ದಿಶೆಯಲ್ಲಿ ಮಂಗಳೂರಿನಲ್ಲಿ ಅಧಿಕಾರಿ ಮಟ್ಟದ ಪ್ರವಾಸೋದ್ಯಮ ಸಭೆ ನಡೆಸಲಾಗಿದೆ. ಸುಳ್ಯದ ಚಾಮಡ್ಕ ಜಲಪಾತ, ಭೋಗಾಯನಕೆರೆ ಸೇರಿದಂತೆ ಸಣ್ಣಪುಟ್ಟ ಜಲಪಾತಗಳನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸುವ ಕುರಿತಂತೆ ಸಮಗ್ರ ರೂಪುರೇಷೆ ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಡೀಮ್ಡ್ ರೆಸ್ಟ್ ಶೀಘ್ರ ವರದಿ: ರಾಜ್ಯದಲ್ಲಿರುವ ಡೀಮ್ಡ್ ರೆಸ್ಟ್ (ವಿಸ್ತರಿತ ಅರಣ್ಯ ಪ್ರದೇಶ)ನಲ್ಲಿ ವಾಸ್ತವ್ಯ ಹೂಡಿರುವವರಿಗೆ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ಗೆ ರಾಜ್ಯ ಸರಕಾರ ವರದಿ ನೀಡಬೇಕಾಗಿದೆ. ಹಲವು ವರ್ಗಗಳ ಈ ಸಮಸ್ಯೆಯನ್ನು ಪರಿಹರಿಸಲು ಸರಕಾರ ಉತ್ಸುಕತೆ ಹೊಂದಿದ್ದು, ಸುಪ್ರೀಂಕೋರ್ಟ್ ಆದೇಶ ಇರುವುದರಿಂದ ಡೀಮ್ಡ್-ರೆಸ್ಟ್‌ನಲ್ಲಿ ವಾಸಿಸುವವರಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಡೀಮ್ಡ್ -ರೆಸ್ಟ್ ಜಾಗವನ್ನು ಗುರುತಿಸಿ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಸರಕಾರವೇ ಸುಪ್ರೀಂಕೋರ್ಟ್‌ಗೆ ಸೂಕ್ತ ವರದಿ ನೀಡಲಿದೆ ಎಂದರು.

ಅ.29ಕ್ಕೆ ಪುನಃ ಸಭೆ: ಗ್ರಾಮ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳ ಹಾಗೂ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯವನ್ನು ನಡೆಸಲಾಗುತ್ತಿದೆ. ಇಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಸ್ಥಳದಲ್ಲೇ ಸೂಕ್ತ ಪರಿಹಾರ ಕಂಡುಕೊಳ್ಳಲು ಆದ್ಯತೆ ನೀಡಲಾಗುತ್ತದೆ. ಬಾಕಿಯುಳಿದ ಅರ್ಜಿಗಳಿಗೆ ಅ.29ರಂದು ಇಲ್ಲಿಯೇ ಅಹವಾಲು ಸ್ವೀಕಾರ ಸಭೆ ನಡೆಸಿ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಅಂದು ಗರಿಷ್ಠ ಸಂಖ್ಯೆಯ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಚಿವರು ಅಮರ ಮುಡ್ನೂರು ಹಾಗೂ ಅಮರ ಪಡ್ನೂರು ಗ್ರಾಮಗಳ ಅಂಕಿ-ಅಂಶಗಳುಳ್ಳ ಕೈಪಿಡಿ ಬಿಡುಗಡೆಗೊಳಿಸಿದರು. ಸಾಮಾಜಿಕ ಭದ್ರತೆ, ಹಕ್ಕುಪತ್ರ ಸೇರಿದಂತೆ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.

ಬಳಿಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ನೇತೃತ್ವದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಯಿತು. ಸುಮಾರು 130ಕ್ಕೂ ಅಧಿಕ ಅಹವಾಲು ಅರ್ಜಿ ಸಲ್ಲಿಕೆಯಾಗಿದ್ದು, ಕೆಲವು ಅರ್ಜಿಗಳನ್ನು ಜಿಲ್ಲಾಧಿಕಾರಿ ಸ್ಥಳದಲ್ಲೇ ಇತ್ಯರ್ಥಪಡಿಸಿದರು. ಅಪರಾಹ್ನ ಜಿಲ್ಲಾಧಿಕಾರಿ ವಿವಿಧ ಫಲಾನುಭವಿಗಳು, ಸಂತ್ರಸ್ತರು ಹಾಗೂ ಅಭಿವೃದ್ಧಿ ಕಾಮಗಾರಿಯ ಪರಿಶೀಲನೆ ನಡೆಸಿದರು.

ಸಹಾಯಕ ಆಯುಕ್ತ ಯತೀಶ್ ಉಲ್ಲಾಳ್, ತಹಶೀಲ್ದಾರ್ ಅನಿತಾ ಲಕ್ಷ್ಮಿ, ಸುಳ್ಯ ತಾಪಂ ಇಒ ಭವಾನಿ ಶಂಕರ್, ಉಪ ತಹಶೀಲ್ದಾರ್ ಚಂದ್ರಕಾಂತ್, ಗ್ರಾಪಂ ಪಿಡಿಒ ಆಕಾಶ್, ಡಿಡಿಎಲ್‌ಆರ್ ನಿರಂಜನ್, ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News