ಅಡಿಕೆ ಹಳದಿ ರೋಗಕ್ಕೆ ಪ್ಯಾಕೆಜ್ ಕ್ರಮ: ಜಿಲ್ಲಾಧಿಕಾರಿ ಡಾ.ರಾಜೇಂದ್ರ

Update: 2021-10-16 15:28 GMT

ಮಂಗಳೂರು, ಅ.16: ಕರಾವಳಿ ಹಾಗೂ ಮಲೆನಾಡಿನ ಅಡಿಕೆ ತೋಟದಲ್ಲಿ ಕಂಡುಬಂದಿರುವ ಹಳದಿ ಎಲೆರೋಗಕ್ಕೆ 18 ಕೋಟಿ ರೂ. ಪ್ಯಾಕೆಜ್ ನೀಡುವಂತೆ ರಾಜ್ಯ ಸರಕಾರಕ್ಕೆ ತೋಟಗಾರಿಕಾ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಶೀಘ್ರ ಮಂಜೂರಾತಿ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಅವರು ಶನಿವಾರ ಸುಳ್ಳ ತಾಲೂಕಿನ ಅಮರ ಮುಡ್ನೂರು ಹಾಗೂ ಅಮರ ಪಡ್ನೂರು ಗ್ರಾಪಂ ವ್ಯಾಪ್ತಿಯಲ್ಲಿನ ಗ್ರಾಮಸ್ಥರ ಅಹಲವಾಲು ಆಲಿಸಲು ಹಾಗೂ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿಕೊಡಲು ಕುಕ್ಕುಜಡ್ಕದ ಕೃಷಿ ಪತ್ತಿನ ಪ್ರಾಥಮಿಕ ಸಹಕಾರಿ ಸಂಘದ ಅಮರ ಸಹಕಾರಿ ಸಭಾಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಅಡಿಕೆ ಬೆಳೆಗಾರರೊಬ್ಬರು ಸಲ್ಲಿಸಿದ ಅಹವಾಲಿಗೆ ಉತ್ತರಿಸಿದರು.

ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ನಡಿ ಪರಿಹಾರ ಕ್ರಮಕ್ಕೆ ನಿರ್ಧರಿಸಲಾಗಿದೆ. 3 ಸಾವಿರ ಎಕರೆಗಳಲ್ಲಿ ಹಳದಿ ಎಲೆ ರೋಗ ಅಧ್ಯಯನ ಹಾಗೂ ಪರ್ಯಾಯ ಬೆಳೆಗಳ ಬಗ್ಗೆ ಪ್ಯಾಕೆಜ್‌ನಲ್ಲಿ ಪ್ರಸ್ತಾಪಿಸಲಾಗಿದೆ. ರೋಗಬಾಧಿತ ಅಡಿಕೆ ಮರಕಡಿದು, ಬದಲಿ ಬೆಳೆಗಳನ್ನು ಬೆಳೆಸುವುದಕ್ಕೆ ಈ ಪ್ಯಾಕೆಜ್ ನೆರವಾಗಲಿದೆ. ಇದೇ ವೇಳೆ ಅಡಿಕೆ ತೋಟ ನಾಶವಾದ ಕಾರಣ ಪರಿಹಾರ ನೀಡುವಂತೆಯೂ ಬೆಳೆಗಾರರು ಆಗ್ರಹಿಸಿದ್ದಾರೆ. ಇದನ್ನೂ ಸರಕಾರದ ಗಮನಕ್ಕೆ ತರಲಾಗುವುದು ಎಂದರು.

ಅಶಕ್ತರ ಮನೆಗೆ ಲಸಿಕೆ ಅಭಿಯಾನ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಲ್ಲರೂ ಕೋವಿಡ್ ಲಸಿಕೆ ಪಡೆಯಬೇಕು ಎಂಬುದು ನಮ್ಮ ಗುರಿ. ಅಲ್ಲದೆ, ನಡೆದಾಡಲು ಅಸಾಧ್ಯವಾದ ಅಶಕ್ತರಿಗೆ ಮನೆಗಳಿಗೆ ತೆರಳಿ ಲಸಿಕೆ ನೀಡಲು ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಅಂತಹವರ ಮನೆಗೆ ತೆರಳಿ ಲಸಿಕೆ ನೀಡಲಿದ್ದಾರೆ ಎಂದರು.

ಕೊರೋನ ಮುಕ್ತ ಸುಳ್ಯ: ಕೋವಿಡ್ ಎರಡನೇ ಅಲೆಯಲ್ಲೂ ಸುಳ್ಯ ಒಂದು ಸಂದರ್ಭ ಮುಂಚೂಣಿಯಲ್ಲಿತ್ತು. ಈಗ ಕೇವಲ ಒಂದು ಸಕ್ರಿಯ ಪ್ರಕರಣ ಇದೆ. ಈ ಹಿನ್ನೆಲೆಯಲ್ಲಿ ಕೊರೋನ ಮುಕ್ತ ತಾಲೂಕು ಆಗಿ ಸುಳ್ಯವನ್ನು ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News