×
Ad

ಸರಣಿ ರಜೆ: ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ

Update: 2021-10-16 21:49 IST

ಉಡುಪಿ, ಅ.16: ಆಯುಧ ಪೂಜೆ, ವಿಜಯ ದಶಮಿ ರಜೆ ಸಹಿತ ವಾರಂತ್ಯದ ಸರಣಿ ರಜೆಯ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಉಡುಪಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಇದರಿಂದ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬಂದಿದೆ. ಇದರ ಪರಿಣಾಮ ಉಡುಪಿ, ಮಣಿಪಾಲ ಹಾಗೂ ಮಲ್ಪೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಸರಣಿ ರಜೆಯ ಕಾರಣಕ್ಕೆ ಹೊರ ಜಿಲ್ಲೆ ಹಾಗೂ ರಾಜ್ಯಗಳ ಪ್ರವಾಸಿಗರು ಕರಾವಳಿಗೆ ಆಗಮಿಸುತ್ತಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಉಡುಪಿ ಶ್ರೀಕೃಷ್ಣ ಮಠ ಸೇರಿದಂತೆ ತೀರ್ಥ ಕ್ಷೇತ್ರಗಳಲ್ಲಿ ಭಾರೀ ಸಂಖ್ಯೆಯ ಭಕ್ತರು ಕಂಡು ಬರುತ್ತಿದ್ದಾರೆ. ಪ್ರವಾಸಿ ತಾಣ ಗಳಾದ ಮಲ್ಪೆ, ಮರವಂತೆ, ಕಾಪು ಬೀಚ್‌ಗಳಲ್ಲೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ವಿಹಾರಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಜಿಲ್ಲೆ ಯಾದ್ಯಂತ ಜನ ಹಾಗೂ ವಾಹನ ದಟ್ಟಣೆ ಕಂಡುಬಂತು.

ಇದರ ಪರಿಣಾಮ ಉಡುಪಿ ನಗರದಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಸಂಚಾರ ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸ ಪಡಬೇಕಾಯಿತು. ಕಲ್ಸಂಕ, ಕೆಎಂ ಮಾರ್ಗ, ಸಿಟಿ ಬಸ್ ನಿಲ್ದಾಣ, ಕರಾವಳಿ ಬೈಪಾಸ್, ಅಂಬಲಪಾಡಿ ಬೈಪಾಸ್, ಮಲ್ಪೆ ಜಂಕ್ಷನ್, ಕೋರ್ಟ್ ರಸ್ತೆಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಹೆಚ್ಚಿನ ಸಂಚಾರ ದಟ್ಟಣೆ ಕಂಡು ಬಂತು. ಸಂಜೆ ವೇಳೆ ಉಡುಪಿಯ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಇದರಿಂದ ಪ್ರವಾಸಿಗರು ಸಾಕಷು್ಟ ತೊಂದರೆ ಅನುಭವಿಸಬೇಕಾಯಿತು.

ನವರಾತ್ರಿ ಪ್ರಯುಕ್ತ ಸಸ್ಯಹಾರದ ಹಿನ್ನೆಲೆಯಲ್ಲಿ ಕಳೆದ 9 ದಿನಗಳಿಂದ ಸರಿಯಾದ ವ್ಯಾಪಾರ ಇಲ್ಲದೆ ನಲುಗಿದ್ದ ಮಾಂಸಹಾರಿ ಹೋಟೆಲ್‌ಗಳಲ್ಲಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕಂಡುಬಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News