ಮಂಗಳೂರು: ಕೆ.ಐ. ಜಾರ್ಜ್ ನಿಧನ

Update: 2021-10-16 16:56 GMT

ಮಂಗಳೂರು, ಅ.16: ಹಿಂದಿನ ಮಂಗಳೂರು ಪುರಸಭೆಯ ನಿವೃತ್ತ ನಗರ ಯೋಜನಾಧಿಕಾರಿ ಕೆ.ಐ. ಜಾರ್ಜ್ (97) ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ಮೃತರು ಇಬ್ಬರು ಪುತ್ರಿಯರು, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ನಗರ ಯೋಜನಾಧಿಕಾರಿ ಆಗಿ ನಿವೃತ್ತರಾಗುವ ಮುನ್ನ ಅವರು 40 ವರ್ಷಗಳಿಗೂ ಹೆಚ್ಚು ಕಾಲ ಮಂಗಳೂರು ಪುರಸಭೆಯಲ್ಲಿ ಸೇವೆ ಸಲ್ಲಿಸಿದ್ದರು. ಬ್ಲೇಸಿಯಸ್ ಡಿಸೋಜ ಅವರ ಅವಧಿಯಲ್ಲಿ ಪುರಸಭೆಯ ಅಧ್ಯಕ್ಷರಾಗಿದ್ದರು. ಇಡೀ ನಗರದ ಬಡಾವಣೆ, ರಸ್ತೆಗಳು ಮತ್ತು ಸೌಕರ್ಯಗಳನ್ನು ಯೋಜಿಸಿದ ಕೀರ್ತಿ ಅವರಿಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಹೆಸರುಗಳಿಸಿದ್ದರು. ಅವರು ನಗರದ ಹೆಚ್ಚಿನ ವಸತಿ ಬಡಾವಣೆಗಳನ್ನು ಯೋಜಿಸಿದ್ದರೂ ಎಂದಿಗೂ ತನಗಾಗಿ ಸ್ವಂತ ವಸತಿ ಹೊಂದಿರಲಿಲ್ಲ. ಜೀವನದುದ್ದಕ್ಕೂ ಅವರು ಮಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು.

ಕೆ.ಐ. ಜಾರ್ಜ್ 1924 ನವೆಂಬರ್ 17ರಂದು ಕೇರಳದ ತ್ರಿಶೂರ್ ಜಿಲ್ಲೆಯ ಕುನ್ನಂಕುಲಮ್‌ನಲ್ಲಿ ಜನಿಸಿದ್ದರು. ಇಂಜಿನಿಯರಿಂಗ್ ಶಿಕ್ಷಣದ ನಂತರ ಅವರು ರಾಷ್ಟ್ರೀಯ ಪ್ರಕ್ರಿಯೆಯ ಮೂಲಕ ಸರಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಕರ್ನಾಟಕದಲ್ಲಿ ಪುರಸಭೆಗಳ ಆಡಳಿತದಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದರು. ಅವರನ್ನು 1960ರಿಂದ ಮಂಗಳೂರು ಪುರಸಭೆಯಲ್ಲಿ ನೇಮಿಸಲಾಯಿತು. 1970 ಮತ್ತು 1980ರ ನಡುವಿನ ಅವಧಿಯಲ್ಲಿ, ಮಂಗಳೂರು 1974ರಲ್ಲಿ ನವ ಮಂಗಳೂರು ಬಂದರನ್ನು ತೆರೆಯುವುದರ ಮೂಲಕ ಮತ್ತು 1976ರಲ್ಲಿ ಮಂಗಳೂರು ಕೆಮಿಕಲ್ಸ್ ಫರ್ಟಿಲೈಸರ್ಸ್ ಲಿ.ನ್ನು ಪ್ರಾರಂಭಿಸುವ ಮೂಲಕ ಗಮನಾರ್ಹ ಬೆಳವಣಿಗೆಯಾಯಿತು. ಕೆ.ಐ. ಜಾರ್ಜ್ ನಗರ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಪ್ರದೇಶಗಳನ್ನು ಕೂಡ ಯೋಜಿಸಿದರು. 20ನೇ ಶತಮಾನದ ಕೊನೆಯಲ್ಲಿ ಮತ್ತು 21ನೇ ಶತಮಾನದ ಆರಂಭದಲ್ಲಿ ನಗರವು ವಾಣಿಜ್ಯ ಮತ್ತು ಪೆಟ್ರೋಕೆಮಿಕಲ್ ಕೇಂದ್ರವಾಗಿ ಅಭಿವೃದ್ಧಿ ಹೊಂದಲು ಆರಂಭಿಸಿದಾಗ ಅವರ ದೂರದೃಷ್ಟಿಯ ಯೋಜನೆ ನೆಲೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News