ಸಿಂಘು ಗಡಿಯಲ್ಲಿ ಯುವಕನ ಹತ್ಯೆ: ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ದಲಿತ ಸಂಘಟನೆಗಳ ಆಗ್ರಹ

Update: 2021-10-16 17:20 GMT

ಹೊಸದಿಲ್ಲಿ, ಅ. 16: ರೈತರ ಪ್ರತಿಭಟನಾ ಸ್ಥಳವಾದ ಸಿಂಘುವಿನಲ್ಲಿ ದಲಿತ ಯುವಕನ ಹತ್ಯೆ ನಡೆಸಿ ಆತನ ಮೃತದೇಹವನ್ನು ಪೊಲೀಸ್ ಬ್ಯಾರಿಕೇಡ್ಗೆ ಕಟ್ಟಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸುಮಾರು 15 ದಲಿತ ಸಂಘಟನೆಗಳು ಶನಿವಾರ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಪಂಜಾಬ್ನ ತರಣ್ತರಣ್ ಜಿಲ್ಲೆಯ ನಿವಾಸಿ ಲಖ್ಬೀರ್ ಸಿಂಗ್ (35) ಅವರ ಮೃತದೇಹ ಮಗುಚಿಬಿದ್ದ ಪೊಲೀಸ್ ಬ್ಯಾರಿಕೇಡ್ಗೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತನ ದೇಹದಲ್ಲಿ ಹರಿತವಾದ ಆಯುಧದಿಂದ ಮಾಡಿದ ಗಾಯಗಳು ಕಂಡು ಬಂದಿತ್ತು.

ಅಖಿಲ ಭಾರತೀಯ ಕತಿಕ್ ಸಮಾಜ, ಅಖಿಲ ಭಾರತೀಯ ಬೆರ್ವಾ ವಿಕಾಸ ಸಂಘ, ಧನಕ್ ವೆಲ್ಫೇರ್ ಅಸೋಸಿಯೇಶನ್, ದಲಿತ ಉದ್ಯೋಗಿಗಳ, ವೃತ್ತಿಪರರ ಸಂಘಟನೆಗಳು ಹಾಗೂ ಇತರ ಸಂಘಟನೆಗಳು ಸೇರಿದಂತೆ 15ಕ್ಕೂ ಅಧಿಕ ದಲಿತ ಸಂಘಟನೆಗಳು ಮನವಿಯನ್ನು ರಾಷ್ಟ್ರೀಯ ಪರಿಶಿಷ್ಟ ಆಯೋಗದ ಅಧ್ಯಕ್ಷ ವಿಜಯ್ ಸಂಪ್ಲಾ ಅವರಿಗೆ ಸಲ್ಲಿಸಿದ್ದಾರೆ.

ಈ ಬರ್ಬರ ಘಟನೆಯನ್ನು ಪಾರದರ್ಶಕ ತನಿಖೆ ನಡೆಸಬೇಕು ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ದಲಿತ ಸಂಘಟನೆಗಳು ಮನವಿಯಲ್ಲಿ ಆಗ್ರಹಿಸಿವೆ.

ರೈತ ಪ್ರತಿಭಟನೆ ಸ್ಥಳದಲ್ಲಿ ದಲಿತ ವ್ಯಕ್ತಿಯ ಹತ್ಯೆಯ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಶುಕ್ರವಾರ ಹರ್ಯಾಣ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ಸಾಮಾಜಿಕ ಜಾಲ ತಾಣದಲ್ಲಿ ಈ ಘಟನೆಯ ವೀಡಿಯೊ ತುಣುಕು ವೈರಲ್ ಆಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿರುವ, ಕೈ ಕತ್ತರಿಸಿದ ವ್ಯಕ್ತಿಯ ಸಮೀಪ ಕೆಲವು ವ್ಯಕ್ತಿಗಳು ನಿಂತಿರುವುದು ಕಂಡು ಬಂದಿದೆ. ಸಿಕ್ಖರ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಈ ವ್ಯಕ್ತಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ವ್ಯಕ್ತಿಗಳು ಹೇಳುತ್ತಿರುವುದು ವೀಡಿಯೊ ತುಣುಕಿನಲ್ಲಿ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News