×
Ad

ಸ್ಮಾರ್ಟ್‌ಸ್ಕೂಲ್ ಹೊಯ್ಗೆಬಜಾರ್ ಸರಕಾರಿ ಪ್ರೌಢಶಾಲೆ ಉದ್ಘಾಟನೆ

Update: 2021-10-16 22:59 IST

ಮಂಗಳೂರು, ಅ.16: ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ಮಾರ್ಟ್‌ಸ್ಕೂಲ್‌ಆಗಿ ನವೀಕರಣಗೊಳಿಸಿದ ಹೊಯ್ಗೆ ಬಜಾರ್‌ನ ಸರಕಾರಿ ಪ್ರೌಢ ಶಾಲೆಯನ್ನು ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಸರಕಾರಿ ಶಾಲೆಗಳ ನವೀಕರಣದಿಂದ ಸಾಕಷ್ಟು ಬಡ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಅನುಕೂಲ ಕಲ್ಪಿಸಿ ಕೊಟ್ಟಂತಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಿಂದ ಸ್ಮಾರ್ಟ್‌ ಸ್ಕೂಲ್ ಎಂಬ ಪರಿಕಲ್ಪನೆ ಯೊಂದಿಗೆ 1.10 ಕೋಟಿ ರೂ. ವೆಚ್ಚದಲ್ಲಿ ಶಾಲೆಯನ್ನು ನವೀಕರಿಸಲಾಗಿದೆ ಎಂದು ಹೇಳಿದರು.

ಸರಕಾರಿ ಶಾಲೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಖಾಸಗಿ ಶಾಲೆಗಳಂತೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪುಗೊಂಡಿದೆ. ಶಾಲೆಯಲ್ಲಿ ಆನ್‌ಲೈನ್ ತರಗತಿಗಳಿಗಾಗಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಅಂತರ್ಜಾಲ ವ್ಯವಸ್ಥೆ, ಶೌಚಾಲಯಗಳ ಆಧುನೀಕರಣ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಕ್ರೀಡಾಂಗಣ, ನೆಲಹಾಸು, ಕಾರ್ಯಕ್ರಮಗಳಿಗಾಗಿ ವೇದಿಕೆ ನಿರ್ಮಾಣ ಸೇರಿದಂತೆ ಶಾಲೆಯ ಆವರಣದಲ್ಲಿ ಹುಲ್ಲುಹಾಸು, ಹೂವಿನಗಿಡ ನೆಡಲಾಗಿದೆ ಎಂದು ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸ್ಮಾರ್ಟ್ ಸ್ಕೂಲ್ ಪರಿಕಲ್ಪನೆಯಿಂದ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಹೆಚ್ಚಿನ ಸಹಾಯವಾಗಲಿದೆ. ಸರಕಾರಿ ಶಾಲೆಗಳನ್ನು ಉನ್ನತೀಕರಿಸುವುದರಿಂದ ವಿದ್ಯಾರ್ಥಿಗಳ ದೈನಂದಿನ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ಸುಮಂಗಲಾ ರಾವ್, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್‌ಕುಮಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸಂದೀಪ್ ಗರೋಡಿ, ಲೋಕೇಶ್ ಬೊಳ್ಳಾಜೆ, ಲೀಲಾವತಿ ಪ್ರಕಾಶ್, ಶೋಭಾ ರಾಜೇಶ್, ಪಾಲಿಕೆ ಸದಸ್ಯರು, ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News