ಕರಾವಳಿಯಲ್ಲಿ ಮುಂದುವರಿದ ಮಳೆ: ಧರಾಶಾಹಿಯಾದ ಮನೆಗಳು, ಕೈಗಾರಿಕಾ ಪ್ರದೇಶಕ್ಕೆ ನುಗ್ಗಿದ ನೀರು

Update: 2021-10-17 05:37 GMT

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಕರಾವಳಿಯಲ್ಲಿ ಮಳೆಯ ಅಬ್ಬರ ಮುಂದುವರಿ ದಿದ್ದು, ಹಲವೆಡೆ ಮನೆ ಹಾನಿ ಸಂಭವಿಸಿವೆ.

ಶನಿವಾರ ಸಂಜೆಯಿಂದ ಮತ್ತೆ ಆರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಪರಿಣಾಮ ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿನ ತಗ್ಗು ಪ್ರದೇಶಕ್ಕೆ ಮಳೆನೀರು ನುಗ್ಗಿದೆ.

ಬೈಕಂಪಾಡಿಯ ಕೈಗಾರಿಕಾ ಪ್ರದೇಶ ವಲಯದಲ್ಲಿನ "ಮಾ ಬೋರ್ಡ್ಸ್ ಪ್ರಾಡಕ್ಟ್" ಕಂಪೆನಿಯ ಒಳಗೆ ಭಾರೀ ಮಳೆ ನೀರು ನಿಂತಿಕೊಂಡಿದ್ದು, ಉಪಕರಣ ಸಹಿತ  ಇತರ ವಸ್ತುಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಮನೆಗಳಿಗೆ ಹಾನಿ: ಬಜಾಲ್‌ನಲ್ಲಿನ ಹೆಂಚಿನ‌ ಮನೆಯೊಂದು ಮಳೆಗೆ ಸಂಪೂರ್ಣ ನೆಲಕಚ್ಚಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮನೆಯ ಸದಸ್ಯರನ್ನು ಸಂಬಂಧಿಗಳ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.

ನಗರದ ಹೊರವಲಯದಲ್ಲಿನ ನೀರು ಮಾರ್ಗದಲ್ಲಿ ಕಂಪೌಂಡ್ ಗೋಡೆ ಹಾಗೂ ವಿದ್ಯುತ್ ಕಂಬ ಕುಸಿದು ಮನೆಗೆ ಭಾಗಶಃ ಹಾನಿಯಾಗಿದೆ. ಪಕ್ಕದಲ್ಲೇ ಸಣ್ಣ ಗುಡ್ಡ ಕುಸಿತ ಸಂಭವಿಸಿದೆ.

ಅ.18ರವರೆಗೆ ಭಾರೀ ಮಳೆ : ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಅ.17 ಮತ್ತು 18ರಂದು ಭಾರೀ ಮಳೆ ಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕೇರಳ ಹಾಗೂ ಮಾಹೆಯಲ್ಲಿ ಭೀಕರ ಮಳೆ ಸುರಿಯುತ್ತಿದ್ದು, ಅ.17ರಂದು ಅದು ಕರ್ನಾಟಕ ಕರಾವಳಿ ಪ್ರದೇಶ ತಲುಪುವ ಸಾಧ್ಯತೆ ಇದೆ. ಕಡಲಿನಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ಇದು 60 ಕಿ.ಮೀ.ವರೆಗೂ ವಿಸ್ತರಿಸುವ ಅಂದಾಜು ಇದೆ. ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News