ಪಡುಬಿದ್ರಿಗೆ ಶೀಘ್ರವೇ ಅಗ್ನಿಶಾಮಕ ಠಾಣೆ: ಶಾಸಕ ಲಾಲಾಜಿ

Update: 2021-10-17 14:36 GMT

ಪಡುಬಿದ್ರಿ: ಕಾಪು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಪಡುಬಿದ್ರಿಯಲ್ಲಿ ಅಗ್ನಿಶಾಮಕ ಠಾಣೆಯು ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರವೇ ಯೋಜನೆ ಜಾರಿಯಾಗುವುದಾಗಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಭರವಸೆ ವ್ಯಕ್ತಪಡಿಸಿದರು.

ಅವರು ಶನಿವಾರ ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 6.75 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಮಾತನಾಡಿದರು.

ಪಡುಬಿದ್ರಿ ಅಗ್ನಿಶಾಮಕ ಠಾಣೆಗಾಗಿ ಈಗಾಗಲೇ 2 ಎಕ್ರೆ ಜಾಗವನ್ನು ಗುರುತಿಸಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳ ಉಡುಪಿ ಜಿಲ್ಲೆಯ ಭೇಟಿಯ ವೇಳೆಯೂ ಪಡುಬಿದ್ರಿ ಠಾಣೆಯ ಕುರಿತಾಗಿ ಉಲ್ಲೇಖಿಸಲಾಗಿದೆ ಎಂದರು.

ಗುದ್ದಲಿ ಪೂಜೆ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ ಮೂರರಲ್ಲಿ 6ಕೋಟಿ ರೂ. ವೆಚ್ಚದಲ್ಲಿ ಪಲಿಮಾರು ಮತ್ತು ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಬಿದ್ರಿ ಪೇಟೆಯಿಂದ ನಂದಿಕೂರು ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಪ್ರವಾಸೋದ್ಯಮ ಇಲಾಖಾ ವತಿಯ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ನಡಿಪಟ್ಣ ಬ್ಲೂ ಫ್ಲ್ಯಾಗ್ ಬೀಚ್ ಸಂಪರ್ಕ ರಸ್ತೆ ಅಭಿವದ್ಧಿಗೂ ಗುದ್ದಲಿ ಪೂಜೆಯನ್ನು ಶಾಸಕ ಲಾಲಾಜಿ ಆರ್. ಮೆಂಡನ್ ನೆರವೇಸಿದರು.

ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು, ಉಪಾಧ್ಯಕ್ಷೆ ಯಶೋದಾ, ಪಿಡಿಒ ಶಶಿಧರ ಆಚಾರ್ಯ, ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ದಿನೇಶ್ ಪ್ರಭು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀತಾ ಗುರುರಾಜ್,  ಪಂಚಾಯತ್‍ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚೆನ್ನಪ್ಪ, ಗುತ್ತಿಗೆದಾರ ಸುರೇಶ್ ಶೆಟ್ಟಿ ಸಹಿತ ಗ್ರಾಮ ಪಂಚಾಯಿತಿ ಉಪಸ್ಥಿತರಿದ್ದರು. ಶ್ರೀ ಪ್ರಸನ್ನ ಪಾರ್ವತಿ ದೇವಸ್ಥಾನದ ಅರ್ಚಕ ಜಗದಾಭಿರಾಮ ಸ್ವಾಮಿ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಆಗ್ರಹ: ಹಿಂದಿನ ಜಿಲ್ಲಾ ಪಂಚಾಯಿತಿ ರಸ್ತೆಯಾಗಿರುವ ಅಬ್ಬೇಡಿ ಬಾಬು ದೇವಾಡಿಗರ ಮನೆಯಿಂದ ಬೊಗ್ಗರ್‍ಲಚ್ಚಿಲ್ ಕೋರ್ದಬ್ಬು ದೈವಸ್ಥಾನದವರೆಗಿನ ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಶಾಸಕ ಲಾಲಾಜಿ ಮೆಂಡನ್ ಅವರಲ್ಲಿ ಸ್ಥಳೀಯರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News