ಬಾಂಗ್ಲಾದೇಶ: ಮತ್ತೊಂದು ಹಿಂದೂ ದೇವಾಲಯ ಧ್ವಂಸಗೊಳಿಸಿದ ದುಷ್ಕರ್ಮಿಗಳು; ಅಂಗಡಿ ಲೂಟಿ

Update: 2021-10-17 16:35 GMT
photo:twitter.com/@ndtvfeed

ಢಾಕಾ, ಅ.17: ಬಾಂಗ್ಲಾದೇಶದಲ್ಲಿ ಹಿಂದು ಸಮುದಾಯದ ದುರ್ಗಾ ಪೂಜಾ ಕಾರ್ಯಕ್ರಮದ ಸಂದರ್ಭ ಧರ್ಮನಿಂದನೆ ಮಾಡಲಾಗಿದೆ ಎಂಬ ಆರೋಪದಲ್ಲಿ ಭುಗಿಲೆದ್ದಿರುವ ಕೋಮು ಹಿಂಸಾಚಾರ ಮುಂದುವರಿದಿದ್ದು ಮತ್ತೊಂದು ಹಿಂದು ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ಈ ಮಧ್ಯೆ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ದೇಶದಾದ್ಯಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹಿಂದು ಸಂಘಟನೆಯ ಮುಖಂಡರು ಘೋಷಿಸಿದ್ದಾರೆ.

ಶನಿವಾರ ನಡೆದ ಹಿಂಸಾಚಾರದ ಸಂದರ್ಭ ಢಾಕಾದ ಸುಮಾರು 157 ಕಿ.ಮೀ ದೂರದಲ್ಲಿರುವ ಫೆನಿ ಎಂಬಲ್ಲಿ ಹಿಂದುಗಳ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ ಮತ್ತು ಅಂಗಡಿಗಳನ್ನು ಲೂಟಿ ಮಾಡಲಾಗಿದೆ ಎಂದು ರವಿವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಲಭೆಕೋರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದು ಫೆನಿ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ನಿಝಾಮುದ್ದೀನ್ ಸಹಿತ ಕನಿಷ್ಟ 40 ಮಂದಿ ಗಾಯಗೊಂಡಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಶನಿವಾರ ಮುನ್ಶೀಗಂಜ್ ನಗರದ ಕಾಳಿಮಂದಿರಕ್ಕೆ ನುಗ್ಗಿದ ತಂಡವೊಂದು ದಾಂಧಲೆ ಎಬ್ಬಿಸಿ ದೇವಸ್ಥಾನದಲ್ಲಿದ್ದ 6 ವಿಗ್ರಹಗಳನ್ನು ಭಗ್ನಗೊಳಿಸಿ ದೇವಸ್ಥಾನವನ್ನು ಧ್ವಂಸ ಮಾಡಿದೆ. ಈ ಹಿನ್ನೆಲೆಯಲ್ಲಿ ಹಲವು ಹಿಂದು ದೇವಾಲಯ, ಹಿಂದುಗಳಿಗೆ ಸೇರಿದ ಅಂಗಡಿಗಳಿಗೆ ಹೆಚ್ಚುವರಿ ಪೊಲೀಸ್ ಪಡೆ, ಅರೆಸೇನಾ ಪಡೆಗಳ ಭದ್ರತೆ ಒದಗಿಸಲಾಗಿದೆ ಎಂದು ವರದಿ ಹೇಳಿದೆ.

ಈ ಮಧ್ಯೆ, ಹಿಂದು ದೇವಾಲಯಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ದೇಶದೆಲ್ಲೆಡೆ ಹಿಂದು ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿವೆ. ದುರ್ಗಾ ಪೂಜೆ ಕಾರ್ಯಕ್ರಮಕ್ಕೆ ವಿಘ್ನ ಉಂಟುಮಾಡಿರುವ ಘಟನೆಯನ್ನು ಖಂಡಿಸಿ ಅಕ್ಟೋಬರ್ 23ರಿಂದ ಧರಣಿ ಮತ್ತು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬಾಂಗ್ಲಾದೇಶ ಹಿಂದು, ಬೌದ್ಧ ಮತ್ತು ಕ್ರೈಸ್ತ ಏಕತಾ ಸಮಿತಿ ಘೋಷಿಸಿದೆ. ಢಾಕಾದ ಶಹಾಬಾಗ್ ಮತ್ತು ಚಿತ್ತಗಾಂಗ್ನ ಅಂದರ್ಕಿಲಾದಲ್ಲಿ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ರಾಣಾ ದಾಸ್ಗುಪ್ತಾ ಚಿತ್ತಗಾಂಗ್ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ದೇವಸ್ಥಾನವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಾಂಗ್ಲಾದೇಶ ಪೂಜಾ ಉದ್ಜಾಪನ್ ಪರಿಷದ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News