ಹೈಟಿಯಲ್ಲಿ 17 ಅಮೆರಿಕನ್ ಕ್ರೈಸ್ತ ಮತಪ್ರಚಾರಕರ ಅಪಹರಣ

Update: 2021-10-17 16:53 GMT
ಸಾಂದರ್ಭಿಕ ಚಿತ್ರ

ಪೋರ್ಟ್-ಅ- ಪ್ರಿನ್ಸ್, ಅ.17: ಹೈಟಿಯ ರಾಜಧಾನಿ ಪೋರ್ಟ್-ಅ-ಪ್ರಿನ್ಸ್ನಲ್ಲಿ ಶನಿವಾರ ರಾತ್ರಿ ಮಕ್ಕಳು ಸೇರಿದಂತೆ 17 ಅಮೆರಿಕನ್ ಕ್ರೈಸ್ತ ಮತಪ್ರಚಾರಕರು ಅನಾಥಾಶ್ರಮವೊಂದರಿಂದ ಹೊರಬರುತ್ತಿದ್ದಂತೆಯೇ ಅವರನ್ನು ತಂಡವೊಂದು ಅಪಹರಿಸಿದೆ ಎಂದು ಹೈಟಿಯ ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಅಪಹರಣ ಕೃತ್ಯದ ಬಗ್ಗೆ ಹೆಚ್ಚಿನ ವಿವರ ಸ್ಪಷ್ಟವಾಗಿಲ್ಲ. ಆದರೆ ಸ್ಥಳೀಯ ಅಧಿಕಾರಿಗಳ ಪ್ರಕಾರ, ತಂಡದ ಕೆಲವು ಸದಸ್ಯರನ್ನು ವಿಮಾನನಿಲ್ದಾಣಕ್ಕೆ ಕಳುಹಿಸಿಕೊಡಲು ಬಸ್ಸು ಏರಿದ್ದ ಮತಪ್ರಚಾರಕರನ್ನು ಅಪಹರಿಸಲಾಗಿದೆ. ಹಲವು ವರ್ಷಗಳಿಂದ ರಾಜಕೀಯ ಅಸ್ಥಿರತೆ ಎದುರಿಸುತ್ತಿರುವ ಹೈಟಿಯಲ್ಲಿ ಅಪಹರಣ ಕೃತ್ಯ ಬಹುತೇಕ ಸಾಮಾನ್ಯ ಘಟನೆಯಾಗಿದೆ. ಆದರೆ ಇಷ್ಟೊಂದು ಸಂಖ್ಯೆಯಲ್ಲಿ ಅಮೆರಿಕನ್ನರ ಅಪಹರಣ ಅಧಿಕಾರಿಗಳಿಗೆ ಆಘಾತ ತಂದಿದೆ. ಈ ಪ್ರಕರಣದ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಭ್ರಷ್ಟಾಚಾರದ ಆರೋಪ ಕೇಳಿಬಂದಿರುವ ಅಧ್ಯಕ್ಷ ಜೊವೆನೆಲ್ ಮೊಯಿಸ್ ಪದತ್ಯಾಗಕ್ಕೆ ಆಗ್ರಹಿಸಿ ಹೈಟಿಯಲ್ಲಿ ಕಳೆದ 2 ವರ್ಷಗಳಿಂದ ವ್ಯಾಪಕ ಪ್ರತಿಭಟನೆ ನಡೆಯುತ್ತಿತ್ತು. ಈ ಮಧ್ಯೆ, ಜುಲೈಯಲ್ಲಿ ಮೊಯಿಸ್ರನ್ನು ಅವರ ಮನೆಯಲ್ಲೇ ಹತ್ಯೆ ಮಾಡಿದ ಬಳಿಕ ದೇಶದಲ್ಲಿ ಕಾನೂನು ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ. ಆಸ್ಪತ್ರೆ, ಶಾಲೆ, ಕಚೇರಿಗಳಲ್ಲಿನ ದೈನಂದಿನ ಕಾರ್ಯ ಅಸ್ತವ್ಯಸ್ತಗೊಂಡಿದ್ದು ದೇಶದ ಹಲವೆಡೆ ವಿದ್ಯುತ್ ಪೂರೈಕೆಯೂ ಸ್ಥಗಿತಗೊಂಡಿದೆ. ಈ ಅವ್ಯವಸ್ಥೆಯ ನಡುವೆ ಅಪಹರಣಕಾರರ ತಂಡ ಸಕ್ರಿಯವಾಗಿದ್ದು ಶಾಲಾ ಮಕ್ಕಳನ್ನು , ಧರ್ಮಗುರುಗಳನ್ನು ಅಪಹರಿಸುವ ಕೃತ್ಯ ನಿರಂತರ ನಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News