ಬ್ರಿಟನ್ ಸಂಸದನ ಹತ್ಯೆ ಪ್ರಕರಣ: ಸೋಮಾಲಿ ಮೂಲದ ಆರೋಪಿ ವಿರುದ್ಧ ಭಯೋತ್ಪಾದನೆ ಕಾಯ್ದೆಯಡಿ ಪ್ರಕರಣ ದಾಖಲು

Update: 2021-10-17 17:51 GMT
photo:twitter.com/@EurasiaReview

ಲಂಡನ್, ಅ.17: ಬ್ರಿಟನ್ ಸಂಸದ ಸರ್ ಡೇವಿಡ್ ಅಮೆಸ್ ಹತ್ಯೆ ಪ್ರಕರಣದ ಆರೋಪಿ, ಸೊಮಾಲಿ ಮೂಲದ ಅಲಿ ಹರ್ಬಿ ಅಲಿ ಎಂಬ ವ್ಯಕ್ತಿಯನ್ನು ಇಂಗ್ಲೆಂಡಿನ  ಎಸ್ಸೆಕ್ಸ್ ನಲ್ಲಿ ಬಂಧಿಸಿದ್ದು ಆತನ ವಿರುದ್ಧ ಭಯೋತ್ಪಾದನೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ. ಬ್ರಿಟನ್ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸಂಸದ, 69 ವರ್ಷದ ಅಮೆಸ್ ಶುಕ್ರವಾರ ಎಸ್ಸೆಕ್ಸ್ ಲೀ ಆನ್ ಸೀ ಪ್ರದೇಶದ ಬೆಲ್ಫೇರ್ಸ್ ಮೆಥಾಡಿಸ್ಟ್ ಚರ್ಚ್ ನಲ್ಲಿ  ತನ್ನ ಕ್ಷೇತ್ರದ ಜನತೆಯೊಂದಿಗೆ ಸಭೆ ನಡೆಸುತ್ತಿದ್ದ ಸಂದರ್ಭ ಹಲವು ಬಾರಿ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿತ್ತು. ಆರೋಪಿಯನ್ನು ಘಟನೆ ನಡೆದ ಸ್ಥಳದಲ್ಲೇ ಬಂಧಿಸಿದ್ದು ಆತನಿಂದ ಕೃತ್ಯಕ್ಕೆ ಬಳಸಿದ್ದ ಚೂರಿಯನ್ನು ವಶಕ್ಕೆ ಪಡೆಯಲಾಗಿದೆ. ಇತರ ಶಂಕಿತ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

ಆಲಿಯನ್ನು ಶುಕ್ರವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು ಸ್ಕಾಟ್ಲೆಂಡ್ ಯಾರ್ಡ್ನ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಕೆಲ ವರ್ಷದ ಹಿಂದೆ ಬ್ರಿಟನ್ ಭಯೋತ್ಪಾದನೆ ನಿರ್ಮೂಲನೆ ಯೋಜನೆಗೆ ಶಿಫಾರಸು ಮಾಡಲಾಗಿತ್ತು ಎಂದು ಮೆಟ್ರೊಪಾಲಿಟನ್ ಪೊಲೀಸರು ಹೇಳಿದ್ದಾರೆ.

 ಇದೊಂದು ಭಯೋತ್ಪಾದಕ ಕೃತ್ಯವಾಗಿದೆ ಎಂದು ಭಯೋತ್ಪಾದನೆ ನಿಗ್ರಹ ಪೊಲೀಸ್ ದಳ ಘೋಷಿಸಿದ್ದು , ಉಪ ಸಹಾಯಕ ಆಯುಕ್ತ ಡೀನ್ ಹೇಡನ್ ಮತ್ತು ಮೆಟ್ರೊಪಾಲಿಟನ್ ಪೊಲೀಸ್ ದಳದ ಭಯೋತ್ಪಾದನೆ ನಿಗ್ರಹ ದಳ ತನಿಖೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

ಈ ಘಟನೆಯ ಬಳಿಕ ಸಂಸದರ ಭದ್ರತೆಯನ್ನು ತಕ್ಷಣದಿಂದಲೇ ಬಿಗುಗೊಳಿಸಲು ಸೂಚಿಸಲಾಗಿದೆ. ಸಂಸದರು ತಾವು ಇರುವ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ ಎಂದು ಬ್ರಿಟನ್ ಗೃಹ ಇಲಾಖೆ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News