ಪ್ಯಾರಿಸ್ ನಲ್ಲಿ ಅಲ್ಜೀರಿಯಾ ಪ್ರತಿಭಟನಾಕಾರರ ಸಾಮೂಹಿಕ ಹತ್ಯೆ ಅಕ್ಷಮ್ಯ ಅಪರಾಧ: ಫ್ರಾನ್ಸ್ ಅಧ್ಯಕ್ಷ ಮಾಕ್ರನ್

Update: 2021-10-17 18:27 GMT

ಪ್ಯಾರಿಸ್, ಅ.17: ಅಲ್ಜೀರಿಯದ ಪ್ರಜೆಗಳ ವಿರುದ್ಧ ವಿಧಿಸಿದ್ದ ಕರ್ಫ್ಯೂ ವಿರೋಧಿಸಿ 1961ರಲ್ಲಿ ಪ್ಯಾರಿಸ್ ನಲ್ಲಿ  ನಡೆದ ಪ್ರತಿಭಟನಾ ರ್ಯಾಲಿಯನ್ನು ಚದುರಿಸಲು ಫ್ರಾನ್ಸ್ ನ ಪೊಲೀಸರು ಕೈಗೊಂಡ ಮಾರಕ ಕ್ರಮ ಅಕ್ಷಮ್ಯ ಅಪರಾಧವಾಗಿದೆ ಎಂದು ಫ್ರಾನ್ಸ್ ನ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಖಂಡಿಸಿದ್ದಾರೆ.

ಈ ರಕ್ತಪಾತದ 60ನೇ ವಾರ್ಷಿಕ ದಿನದಂದು ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಕ್ರನ್ ‘ ಪೊಲೀಸರ ಅಮಾನುಷ ಕಾರ್ಯಾಚರಣೆಯಲ್ಲಿ ಹಲವು ಡಜನ್ ಪ್ರತಿಭಟನಾಕಾರರು ಮೃತರಾಗಿದ್ದು ಮೃತದೇಹವನ್ನು ಸೀನ್ ನದಿಗೆ ಎಸೆಯಲಾಗಿತ್ತು.ಇದೊಂದು ಅಕ್ಷಮ್ಯ ಅಪರಾಧವಾಗಿದೆ’ ಎಂದು ಹೇಳಿದರಲ್ಲದೆ, ಮೃತ ಪ್ರತಿಭಟನಾಕಾರರಿಗೆ ಶೃದ್ಧಾಂಜಲಿ ಸಲ್ಲಿಸಿದರು.

 ಅಲ್ಜೀರಿಯಾವನ್ನು ಉತ್ತರ ಆಫ್ರಿಕಾದ ವಸಾಹತು ದೇಶವಾಗಿ ಉಳಿಸಿಕೊಳ್ಳಲು ಫ್ರಾನ್ಸ್ ನಡೆಸುತ್ತಿರುವ ಪ್ರಯತ್ನದ ಅಂಗವಾಗಿ ಅಲ್ಜೀರಿಯಾದ ಪ್ರಜೆಗಳ ವಿರುದ್ಧ ಜಾರಿಗೊಳಿಸಿದ್ದ ಕರ್ಫ್ಯೂ ವಿರೋಧಿಸಿ 1961ರ ಅಕ್ಟೋಬರ್ 17ರಂದು ನ್ಯಾಷನಲ್ ಲಿಬರೇಷನ್ ಫ್ರಂಟ್ನ ಸುಮಾರು 25,000 ಬೆಂಬಲಿಗರು ಪ್ರತಿಭಟನಾ ರ್ಯಾಲಿ ನಡೆಸಿದ್ದರು. ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗಿಸುವಂತೆ ಪ್ಯಾರಿಸ್ನ ಕುಖ್ಯಾತ ಪೊಲೀಸ್ ಮುಖ್ಯಸ್ಥ ಮಾರಿಸ್ ಪಾಪನ್ ಪೊಲೀಸ್ ಪಡೆಗೆ ಆದೇಶಿಸಿದ್ದರು. 

ಪೊಲೀಸರ ಅಮಾನುಷ ಕಾರ್ಯಾಚರಣೆಯಲ್ಲಿ ನೂರಾರು ಪ್ರತಿಭಟನಾಕಾರರು ಮೃತಪಟ್ಟಿದ್ದು ಅವರ ದೇಹವನ್ನು ಸೀನ್ ನದಿಗೆ ಎಸೆಯಲಾಗಿತ್ತು. ಇದರಿಂದ ಮೃತಪಟ್ಟವರ ಬಗ್ಗೆ ಮಾಹಿತಿ ಅಪೂರ್ಣವಾಗಿಯೇ ಉಳಿದಿದೆ.
ಎರಡನೇ ವಿಶ್ವಯುದ್ಧದ ಸಂದರ್ಭ ಜರ್ಮನ್ನ ನಾಝಿಗಳ ಸಹಯೋಗಿಯಾಗಿ ಕಾರ್ಯನಿರ್ವಹಿಸಿದ್ದಾಗಿ ಬಳಿಕ ಪಾಪನ್ ಬಹಿರಂಗಗೊಳಿಸಿದ್ದರು. ಮಾನವೀಯತೆಯ ವಿರುದ್ಧದ ಅಪರಾಧಕ್ಕಾಗಿ ದೋಷಿ ಎಂದು ಘೋಷಿಸಲಾಗಿದ್ದರೂ ಬಳಿಕ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು.

ಪೊಲೀಸರ ಕಾರ್ಯಾಚರಣೆಯಲ್ಲಿ ಹಲವು ನೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾನವಹಕ್ಕು ಸಂಘಟನೆಯ ಕಾರ್ಯಕರ್ತರು ಹೇಳಿದ್ದಾರೆ.

ಪ್ರತಿಭಟನಾ ರ್ಯಾಲಿಯನ್ನು ಅತ್ಯಂತ ಕ್ರೂರವಾಗಿ, ಹಿಂಸಾತ್ಮಕವಾಗಿ ಮತ್ತು ರಕ್ತಪಾತದ ಮೂಲಕ ನಿಗ್ರಹಿಸಲಾಗಿದೆ. ಮಾರಿಸ್ ಪಾಪನ್ ನೇತೃತ್ವದಲ್ಲಿ ಆ ರಾತ್ರಿ ನಡೆದ ಅಪರಾಧ ಅಕ್ಷಮ್ಯವಾಗಿದೆ ಎಂದು ಮಾಕ್ರನ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News