ಹಬ್ಬದ ಭರಾಟೆ: ಈರುಳ್ಳಿ, ಟೊಮ್ಯಾಟೊ ಬೆಲೆ ಏರಿಕೆ

Update: 2021-10-18 03:35 GMT

ಹೊಸದಿಲ್ಲಿ: ಹಬ್ಬದ ಋತುವಿನಲ್ಲಿ ಅಡುಗೆಮನೆ ಪದಾರ್ಥಗಳ ಬೆಲೆ ನಿಯಂತ್ರಣಕ್ಕೆ ಸರ್ಕಾರ ಪ್ರಯತ್ನ ನಡೆಸುತ್ತಿರುವ ನಡುವೆಯೇ ಬೆಲೆ ಏರಿಕೆ ಪ್ರವೃತ್ತಿ ಮುಂದುವರಿದಿರುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಬೇಳೆಕಾಳು ಹಾಗೂ ಪ್ರಮುಖ ಖಾದ್ಯ ತೈಲಗಳ ಬೆಲೆ ಹಿಂದಿನ ತಿಂಗಳಿನ ಮಟ್ಟದಲ್ಲೇ ಮುಂದುವರಿದಿದ್ದರೆ, ತೈಲಬೆಲೆ ಏರಿಕೆ ಮತ್ತು ಬೇಸಿಗೆ ಬೆಳೆ ಹಾಳಾಗಿರುವ ಹಿನ್ನೆಲೆಯಲ್ಲಿ ಈರುಳ್ಳಿ ಹಾಗೂ ಟೊಮ್ಯಾಟೊ ಬೆಲೆ ಗಗನಮುಖಿಯಾಗಿದೆ.

ದೇಶಾದ್ಯಂತ 100 ಕೇಂದ್ರಗಳಿಂದ ಸಂಗ್ರಹಿಸಿದ ಸರ್ಕಾರಿ ಅಂಕಿ ಅಂಶಗಳ ಪ್ರಕಾರ ರವಿವಾರ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 39 ರೂಪಾಯಿಗೆ ಏರಿದೆ. ಒಂದು ತಿಂಗಳ ಹಿಂದೆ ಈರುಳ್ಳಿ ದರ 28 ರೂ. ಇತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಕೆಜಿ ಈರುಳ್ಳಿ ದರ 46 ರೂ. ಇತ್ತು. ದೆಹಲಿ, ಮುಂಬೈ ಮತ್ತು ಚೆನ್ನೈನಂಥ ಮಹಾನಗರಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 50- 65 ರೂಪಾಯಿಗೆ ಏರಿದೆ.

ಅಂತೆಯೇ ಸೆಪ್ಟೆಂಬರ್‌ನಲ್ಲಿ ಇದ್ದ ಟೊಮ್ಯಾಟೊ ಬೆಲೆ ಪ್ರತಿ ಕೆಜಿಗೆ 27 ರೂಪಾಯಿಯಿಂದ 45 ರೂಪಾಯಿಗೆ ಹೆಚ್ಚಿದೆ. ವರ್ಷದ ಹಿಂದೆ ಈ ದರ ಕೆಜಿಗೆ 41 ರೂ. ಆಗಿತ್ತು. ಕೊಲ್ಕತ್ತಾದಲ್ಲಿ ಟೊಮ್ಯಾಟೊ ಮಾರಾಟ ಬೆಲೆ 93 ರೂ. ತಲುಪಿದೆ. ಇತ್ತೀಚೆಗೆ ದೇಶದ ವಿವಿಧೆಡೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಟೊಮ್ಯಾಟೊ ದರ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ನಿನ್ನೆಯಷ್ಟೇ ಹೇಳಿಕೆ ನೀಡಿ, "ಈರುಳ್ಳಿ, ಟೊಮ್ಯಾಟೊ ಮತ್ತು ಆಲೂಗಡ್ಡೆ ದರ ಕಳೆದ ವರ್ಷಕ್ಕಿಂತ ಕಡಿಮೆ ಇದೆ" ಎಂದು ಹೇಳಿತ್ತು.

ಸಾಮಾನ್ಯವಾಗಿ ಸೆಪ್ಟೆಂಬರ್‌ನಿಂದ ನವೆಂಬರ್ ಅವಧಿಯಲ್ಲಿ ದಾಸ್ತಾನು ಕುಸಿಯುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾ ಗುತ್ತದೆ. ನವೆಂಬರ್ ಮಧ್ಯದ ಬಳಿಕ ಹೊಸ ಮಾಲು ಬಂದ ಬಳಿಕ ದರ ಇಳಿಕೆಯಾಗುತ್ತದೆ. ಅಕ್ಟೋಬರ್ 12ರಿಂದ ಗ್ರಾಹಕ ವ್ಯವಹಾರಗಳ ಸಚಿವಾಲಯ ಬಫರ್ ಸ್ಟಾಕ್‌ನಿಂದ ಈರುಳ್ಳಿ ಬಿಡುಗಡೆ ಮಾಡುತ್ತಿದ್ದು, ಇದುವರೆಗೆ ದೆಹಲಿ, ಕೊಲ್ಕತ್ತಾ, ಲಕ್ನೋ, ಪಾಟ್ನಾ, ರಾಂಚಿ, ಹೈದರಾಬಾದ್, ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಛತ್ತೀಸ್‌ ಗಢ ಮಾರುಕಟ್ಟೆಗಳಲ್ಲಿ 67,357 ಟನ್ ಈರುಳ್ಳಿ ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News