×
Ad

ಸಂಯುಕ್ತ ಕಿಸಾನ್ ಮೋರ್ಚಾದಿಂದ ಇಂದು ದೇಶಾದ್ಯಂತ 'ರೈಲ್ ರೋಕೋ' ಪ್ರತಿಭಟನೆ

Update: 2021-10-18 11:15 IST

ಹೊಸದಿಲ್ಲಿ: ಉತ್ತರಪ್ರದೇಶದ ಲಖಿಂಪುರಖೇರಿ ಹಿಂಸಾಚಾರ ಘಟನೆಗೆ ಸಂಬಂಧಿಸಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಿ ಬಂಧಿಸಬೇಕೆಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು ದೇಶಾದ್ಯಂತ 'ರೈಲ್ ರೋಕೋ' ಪ್ರತಿಭಟನೆಗೆ ಕರೆ ನೀಡಿದೆ.

ಲಖಿಂಪುರ ಖೇರಿ ಹಿಂಸಾಚಾರದಲ್ಲಿ ನ್ಯಾಯಕ್ಕಾಗಿ ಶಾಂತಿಯುತ ರಾಷ್ಟ್ರವ್ಯಾಪಿ ರೈಲ್ ರೋಕೋ ಪ್ರತಿಭಟನೆಯನ್ನು ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ನಡೆಸುವುದಾಗಿ ರೈತ ಸಂಘಗಳ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ ರವಿವಾರ ಪ್ರಕಟಿಸಿತ್ತು.

ಅ.3ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಗುಂಪಿನ ಮೇಲೆ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಕಾರು ಓಡಿಸಿ ನಾಲ್ವರು ರೈತರನ್ನು ಹತ್ಯೆಗೈದಿದ್ದ.  

ಪಂಜಾಬ್ ಹಾಗೂ  ಇತರೆಡೆಗಳಲ್ಲಿ ರೈತರು ತಮ್ಮ ಪ್ರತಿಭಟನೆಯ ಭಾಗವಾಗಿ ರೈಲು ಹಳಿಗಳ ಮೇಲೆ ಕುಳಿತಿದ್ದಾರೆ. ಫಿರೋಝ್ ಪುರ ವಿಭಾಗದ ನಾಲ್ಕು ವಿಭಾಗಗಳನ್ನು ಪ್ರತಿಭಟನಾಕಾರರು ನಿರ್ಬಂಧಿಸಿದ್ದಾರೆ ಎಂದು ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫಿರೋಝ್ ಪುರ ನಗರದಲ್ಲಿರುವ ಫಿರೋಝ್ ಪುರ-ಫಜಿಲ್ಕಾ ವಿಭಾಗ ಹಾಗೂ ಮೊಗಾದಲ್ಲಿ ಅಜಿತ್‌ವಾಲ್‌ನಲ್ಲಿರುವ ಫಿರೋಝ್ ಪುರ-ಲುಧಿಯಾನಾ ವಿಭಾಗದ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.

ಉತ್ತರ ಪ್ರದೇಶದ  ಲಕ್ನೋದಲ್ಲಿ ಪೊಲೀಸರು ಸೆಕ್ಷನ್ 144 ರ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಿದ್ದಾರೆ.

"ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ವಿಭಿನ್ನವಾಗಿರುತ್ತವೆ. ನಾವು ರೈಲುಗಳನ್ನು ನಿಲ್ಲಿಸುತ್ತೇವೆಂದು ದೇಶಾದ್ಯಂತ ಜನರಿಗೆ ತಿಳಿದಿದೆ. ಕೇಂದ್ರವು ನಮ್ಮೊಂದಿಗೆ ಇನ್ನೂ ಮಾತನಾಡಲಿಲ್ಲ" ಎಂದು ರೈತ ಸಂಘಟನೆಗಳ 'ರೈಲು ರೋಕೋ' ಚಳುವಳಿಯ ಕುರಿತು ಭಾರತೀಯ ಕಿಸಾನ್ ಒಕ್ಕೂಟದ ರಾಕೇಶ್ ಟಿಕಾಯತ್  ಹೇಳಿದರು ಎಂದು  ANI ವರದಿ ಮಾಡಿದೆ.

ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರವನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾದ 'ರೈಲ್  ರೋಕೋ' ಕರೆ ನೀಡಿರುವ ಹಿನ್ನೆಲೆಯಲ್ಲಿ ಹರ್ಯಾಣದ ಸೋನಿಪತ್ ರೈಲ್ವೇ ನಿಲ್ದಾಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ನಿಯೋಜಿಸಲಾಗಿದೆ.

ಇಂದು ಪಂಜಾಬ್ ನ ಅಮೃತಸರದ ದೇವಿ ದಾಸ್ ಪುರ ಹಳ್ಳಿಯಲ್ಲಿ ರೈಲ್ವೇ ಟ್ರ್ಯಾಕ್ ಮೇಲೆ ಕುಳಿತಿರುವ ರೈತರು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News