×
Ad

ಪಂಪ್‌ವೆಲ್‌ ನಲ್ಲಿ ಯುವಕನ ಕೊಲೆ ಪ್ರಕರಣ; ಐವರು ಆರೋಪಿಗಳ ಬಂಧನ: ಕಮಿಷನರ್ ಶಶಿಕುಮಾರ್

Update: 2021-10-18 14:29 IST

ಮಂಗಳೂರು : ನಗರದ ಪಂಪ್‌ವೆಲ್‌ನ ಲಾಡ್ಜ್ ಒಂದರಲ್ಲಿ ದಸರಾ ಪಾರ್ಟಿ ಮಾಡುತ್ತಿದ್ದ ವೇಳೆ ಯುವಕರ ನಡುವಿನ ಜಗಳದ ಸಂದರ್ಭ ನಡೆದ ಕೊಲೆ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸುರತ್ಕಲ್‌ನ ಜಾಯ್ಸನ್ ಯಾನೆ ಜೇಸನ್ (21), ಜೆಪ್ಪು ಬಪ್ಪಾಲ್‌ನ ಪ್ರಮೀತ್ ಡಿ (24), ವಾಮಂಜೂರಿನ ಕಾರ್ತಿಕ್ (21), ಪಚ್ಚನಾಡಿಯ ಪ್ರಜ್ವಲ್ (22), ದುರ್ಗೇಶ್ (22) ಎಂದು ಗುರುತಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಹತ್ಯೆಗೀಡಾಗಿರುವ ಧನುಷ್ ಪಚ್ಚನಾಡಿ, ಅ. 15ರಂದು ಪಂಪ್‌ವೆಲ್ ಬಳಿಯ ಲಾಡ್ಜ್‌ನಲ್ಲಿ ರೂಂ ನಲ್ಲಿ ತನ್ನ ಗೆಳೆಯರಾದ ಜಾಯ್ಸನ್, ಪ್ರಮೀತ್, ಕಾರ್ತಿಕ್, ಪ್ರಜ್ವಲ್ ಹಾಗೂ ದುರ್ಗೇಶ್ ಜತೆ ಪಾರ್ಟಿ ಮಾಡುತ್ತಿದ್ದರು. ಧನುಷ್ ಹಿಂದೆ ತನ್ನ ಗೆಳೆಯರ ಜತೆ ಮಾತನಾಡುವ ಸಂದರ್ಭ ಅವಾಚ್ಯ ಶಬ್ಧಗಳನ್ನು ಉಪಯೋಗಿಸಿಕೊಂಡು ಮಾತನಾಡುತ್ತಿದ್ದ ಬಗ್ಗೆ ದ್ವೇಷವಿದ್ದು, ಅದನ್ನು ರಾಜಿ ಪಂಚಾಯ್ತಿ ಮೂಲಕ ಬಗೆಹರಿಸುವ ನಿಟ್ಟಿನಲ್ಲಿ ದುರ್ಗೇಶ್ ಮೂಲಕ ಧನುಷ್‌ನನ್ನೂ ಇತರರು ಲಾಡ್ಜ್‌ಗೆ ಕರೆಸಿಕೊಂಡಿದ್ದರು. ಪರಸ್ಪರ ಮಾತುಕತೆಯ ಸಂದರ್ಭ ಜಗಳ ಉಂಟಾಗಿ ಪರಸ್ಪರ ಬೈದಾಡಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ಸಂದರ್ಭ ಜಾಯ್ಸನ್ ತನ್ನಲ್ಲಿದ್ದ ಹರಿತವಾದ ಆಯುಧದಿಂದ ಧನುಷ್‌ನ ಎದೆಗೆ ಚುಚ್ಚಿ ಕೊಲೆ ಮಾಡಿದ್ದು, ಬಳಿಕ ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದರು. ಘಟನಾ ಸಂದರ್ಭ ಮೃತ ಧನುಷ್ ಸೇರಿದಂತೆ ಒಟ್ಟು ಏಳು ಮಂದಿಯಿದ್ದು, ಇದೀಗ ಐದು ಮಂದಿಯನ್ನು ಬಂಧಿಸಲಾಗಿದ್ದು, ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಅವರು ವಿವರಿಸಿದರು.

ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದ್ದು, ಬಂಧಿತರಲ್ಲಿ ಜಾಯ್ಸನ್, ಪ್ರಮೀತ್ ಡಿ., ಕಾರ್ತಿಕ್ ಈ ಹಿಂದೆಯೂ ಎನ್‌ಡಿಪಿಎಸ್, ಗಲಭೆ, ಮೊದಲಾದ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದು ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

ದಕ್ಷಿಣ ಉಪ ವಿಭಾಗದ ಸಹಾಯಕ ಪೊಲಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News