ರಾಷ್ಟ್ರೀಯ ಹೆದ್ದಾರಿಗೆ ಬಿಡುತ್ತಿದ್ದ ಹೊಟೇಲ್ ತ್ಯಾಜ್ಯ; ತುಂಬೆ ಗ್ರಾಪಂ ಅಧಿಕಾರಿ, ಜನಪ್ರತಿನಿಧಿಗಳಿಂದ ಕಾರ್ಯಾಚರಣೆ

Update: 2021-10-18 13:24 GMT

ಬಂಟ್ವಾಳ, ಅ.18: ತುಂಬೆ ಪಂಚಾಯತ್ ವ್ಯಾಪ್ತಿಯ ಕಡೆಗೋಳಿಯಲ್ಲಿ ಹೊಟೇಲ್‌ ತ್ಯಾಜ್ಯವನ್ನು ರಾಷ್ಟ್ರೀಯ ಹೆದ್ದಾರಿಗೆ ಬಿಡುವು ದರ ವಿರುದ್ಧ ಕಾರ್ಯಾಚರಣೆ ಮಾಡಿದ ಅಧಿಕಾರಿಗಳು - ಜನಪ್ರತಿನಿಧಿಗಳನ್ನೊಳಗೊಂಡ ತುಂಬೆ ಪಂಚಾಯತ್ ನಿಯೋಗ ತ್ಯಾಜ್ಯ ನೀರನ್ನು ಬಿಡುತ್ತಿದ್ದ ಪೈಪನ್ನು ಮುಚ್ಚಿ ಸೋಕ್‌ಫಿಟ್ ಮಾಡಿ ತ್ಯಾಜ್ಯವನ್ನು ಅದಕ್ಕೆ ಬಿಡುವಂತೆ ಸಲಹೆ ನೀಡಿದೆ. 

ಕಾರ್ಯಾಚರಣೆಯ ವೇಳೆ ತಾಪಂ ಇಒ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ, ಕೊಳಚೆ ನೀರನ್ನು ಯಾರೂ ಕೂಡ ಹೊರಗೆ ಬಿಡುವುದಕ್ಕೆ ಅವಕಾಶವಿಲ್ಲ. ಅದಕ್ಕಾಗಿ ಸೋಕ್‌ಫಿಟ್ ಮಾಡಬೇಕಿದ್ದು ತುಂಬೆ ಗ್ರಾಪಂ ಕಡೆಗೋಳಿಯಲ್ಲಿ ಆರಂಭಿಸಿದ ಕಾರ್ಯಾಚರಣೆ ಇಡೀ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಬೇಕಿದೆ ಎಂದರು. 

ಪಂಚಾಯತ್ ಅಧ್ಯಕ್ಷ ಪ್ರವೀಣ್ ತುಂಬೆ ಮಾತನಾಡಿ, ಕಡೆಗೋಳಿ ಭಾಗದಲ್ಲಿ ಹೊಟೇಲ್‌ನಿಂದ ತ್ಯಾಜ್ಯವನ್ನು ಹೆದ್ದಾರಿಗೆ ಬಿಡುತ್ತಿರುವುದರಿಂದ ಹೆದ್ದಾರಿಗೆ ಸಾಗುವವರಿಗೆ ತೊಂದರೆಯಾಗುತ್ತಿದೆ. ಪ್ರಾರಂಭದಲ್ಲಿ ಕುಡಿಯುವ ನೀರು ಪೋಲಾಗುತ್ತಿದೆ ಎಂದು ಭಾವಿಸಲಾಗಿತ್ತು. ಆದರೆ ಅದು ಹೋಟೆಲ್ ತ್ಯಾಜ್ಯ ಎಂದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅದನ್ನು ಮುಚ್ಚುವ ಕಾರ್ಯವನ್ನು ಮಾಡಿದ್ದೇವೆ. ಈ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದರು. 

ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ವಳವೂರು, ಅಭಿವೃದ್ಧಿ ಅಧಿಕಾರಿ ಚಂದ್ರಾವತಿ, ಲೆಕ್ಕ ಸಹಾಯಕಿ ಚಂದ್ರಕಲಾ, ಸದಸ್ಯರಾದ ಗಣೇಶ್ ಸಾಲಿಯಾನ್, ಅಬ್ದುಲ್ ಅಝೀಝ್, ಝಹೂರ್ ಅಹ್ಮದ್, ಸಿಬಂದಿ ಮೀನಾಕ್ಷಿ, ಪಂಪು ಆಪರೇಟರ್ ಶ್ರೀಧರ್, ಪೊಲೀಸ್ ಇಲಾಖೆಯ ಎಎಸ್‌ಐ ರಮೇಶ್, ಮಾಧವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News