ಪಾಂಡೇಶ್ವರ ಚಂದ್ರಶೇಖರ ಚಡಗರಿಗೆ ಕಾರಂತ ಪುರಸ್ಕಾರ

Update: 2021-10-18 13:42 GMT

ಕೋಟ ಅ.18: ಕಾರ್ಕಡ-ಸಾಲಿಗ್ರಾಮ ಗೆಳೆಯರ ಬಳಗದ ಆಶ್ರಯದಲ್ಲಿ ಡಾ. ಕೋಟ ಶಿವರಾಮ ಕಾರಂತ ಜನ್ಮ ದಿನಾಚರಣೆಯ ಪ್ರಯುಕ್ತ ಗಾನ ನಮನ, ಕಾರಂತ ಸಂಸ್ಮರಣೆ ಹಾಗೂ 2021ನೇ ಸಾಲಿನ ಕಾರಂತ ಪುರಸ್ಕಾರವನ್ನು ಕಾರಂತರ ಒಡನಾಡಿ, ಪ್ರಗತಿಪರ ಚಿಂತಕ, ಸಾಹಿತಿ ಹಾಗೂ ಕಾರಂತರ ನಿಷ್ಟಾವಂತ ಅಭಿಮಾನಿ ಪಾಂಡೇಶ್ವರ ಚಂದ್ರಶೇಖರ ಚಡಗ ಅವರಿಗೆ ಪ್ರದಾನ ಮಾಡಲಾಯಿತು.

ಸಾಲಿಗ್ರಾಮ ಗಿರಿಜಾ ಕಲ್ಯಾಣ ಮಂಟಪದಲ್ಲಿ ರವಿವಾರ ನಡೆದ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಾಂಡೇಶ್ವರ ಚಂದ್ರಶೇಖರ ನಾವಡ, ಶಿವರಾಮ ಕಾರಂತರು ನನ್ನ ಮಾನಸ ಗುರು. ದ್ರೋಣನಿಗೆ ಏಕಲವ್ಯ ಶಿಷ್ಯನಾದರೆ ನಾನು ಶಿವರಾಮ ಕಾರಂತರಿಗೆ ಶಿಷ್ಯ ಎಂದರು. ಕಾರಂತರಿಗೆ ದೇವರ ಬಗ್ಗೆ ನಂಬಿಕೆ ಇದ್ದಿರಲಿಲ್ಲ, ಆದರೆ ಧರ್ಮದ ಬಗ್ಗೆ ಗೌರವವಿತ್ತು ಎಂದು 1993ರಲ್ಲಿ ಬೆಂಗಳೂರಿನಲ್ಲಿ ಶಿವರಾಮ ಕಾರಂತ ವೇದಿಕೆ ಎಂಬ ಸಂಸ್ಥೆಯನ್ನು ಕಟ್ಟಿ, ಬೆಳಸಿ, ರಾಜಧಾನಿಯಲ್ಲಿ ಕಾರಂತರ ಹೆಸರು ಸದಾ ಮೊಳುವಂತೆ ಮಾಡಿದ ಚಡಗ ತಿಳಿಸಿದರು.

ಕಾರಂತರು 45 ಕಾದಂಬರಿ, ಹಾಗೂ 100ಕ್ಕೂ ಅಧಿಕ ಇತರೇ ಕೃತಿಗಳನ್ನು ಬರೆದರು. ಆದರೆ ಅವರು ಯಾವುದೇ ವಿಮರ್ಶೆಗೂ ಕಿವಿ ಕೊಟ್ಟವರಲ್ಲ ಎಂದು ವಿವರಿಸಿದರು.

ಕಾರ್ಯಕ್ರಮವನ್ನು ಮಂಗಳೂರು ಕ್ಯಾಂಪ್ಕೊ ಲಿಮಿಟೆಡ್‌ನ ಅಧ್ಯಕ್ಷ ಕಿಶೋರ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಕಾರಂತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕುಂದಾಪುರದ ಹಿರಿಯ ಸಾಹಿತಿ, ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಕಾರಂತರ ಸಂಸ್ಮರಣೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಕೋಟ ಸಿ.ಎ. ಬ್ಯಾಂಕಿನ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಮಂಗಳೂರಿನ ಸಾಹಿತಿ ಎಚ್.ಜನಾರ್ದನ ಹಂದೆ, ಕಸಾಪದ ಮಾಜಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮೊದಲಾದವರು ಉಪಸ್ಥಿತರಿದ್ದರು.

ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಸ್ವಾಗತಿಸಿದರೆ, ಕಾರ್ಯದರ್ಶಿ ಕೆ.ಚಂದ್ರಕಾಂತ ನಾಯರಿ ವಂದಿಸಿದರು. ಉಪಾಧ್ಯಕ್ಷ ಕೆ.ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಅಚ್ಚುತ್ ಪೂಜಾರಿ, ಕಾರ್ಕಡ ಸಂಜೀವ ದೇವಾಡಿಗ ಹಾಗೂ ಚಂದ್ರಕಾಂತ್ ನಾಯಿರಿ ಇವರ ಸಂಯೋಜನೆಯಲ್ಲಿ ಗಾನ ನಮನ ಕಾರ್ಯಕ್ರಮ ನಡೆಯಿತು. ಶಶಿಕಾಂತ್ ಶೆಟ್ಟಿ ಕಾರ್ಕಳ ತಂಡದಿಂದ ಯಕ್ಷಗಾನ ಪ್ರದರ್ಶನವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News