ಅನೈತಿಕ ಪೊಲೀಸ್ ಗಿರಿ ಕುರಿತು ಪ್ರಚೋದಕ ಹೇಳಿಕೆ: ಸಿಎಂ ಬೊಮ್ಮಾಯಿಗೆ ಎಐಎಲ್ಎಜೆನಿಂದ ಕಾನೂನು ನೋಟಿಸ್

Update: 2021-10-18 14:44 GMT

ಬೆಂಗಳೂರು,ಅ.18: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚಿಗೆ ಮಂಗಳೂರು ಭೇಟಿ ಸಂದರ್ಭದಲ್ಲಿ ಅನೈತಿಕ ಪೊಲೀಸ್ಗಿರಿಯನ್ನು ಸಮರ್ಥಿಸಿಕೊಂಡು ಪ್ರಮಾಣ ವಚನವನ್ನು ಉಲ್ಲಂಘಿಸಿ ನೀಡಿದ್ದ ಹೇಳಿಕೆಗಳನ್ನು ಹಿಂದೆಗೆದುಕೊಳ್ಳುವಂತೆ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ (ಎಐಎಲ್ಐಜೆ) ಅವರಿಗೆ ಕಾನೂನು ನೋಟಿಸನ್ನು ಕಳುಹಿಸಿದೆ.

ಕೋಮು ಹಿಂಸಾಚಾರಗಳು ಆತಂಕಕಾರಿಯಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಹೇಳಿಕೆಗಳು ಆಘಾತಕಾರಿಯಾಗಿವೆ ಮತ್ತು ಅವರ ಸಾಂವಿಧಾನಿಕ ಶಪಥವನ್ನು ಉಲ್ಲಂಘಿಸಿವೆ ಎಂದು ನೋಟಿಸಿನಲ್ಲಿ ಹೇಳಲಾಗಿದೆ. ನಿಮ್ಮ ಹೇಳಿಕೆಗಳು ಧರ್ಮದ ಹೆಸರಿನಲ್ಲಿ ಅನೈತಿಕ ಪೊಲೀಸ್ಗಿರಿಗೆ ನಿಮ್ಮ ಬೆಂಬಲವಿದೆ ಎನ್ನುವುದನ್ನು ಸೂಚಿಸುತ್ತಿವೆ.

ಧಾರ್ಮಿಕ ದ್ವೇಷದ ಸಂತ್ರಸ್ತರಿಗೆ ಸಾಂತ್ವನದ ಮಾತುಗಳನ್ನು ಹೇಳುವ ಬದಲು ಕಾನೂನನ್ನು ಕೈಗತ್ತಿಕೊಳ್ಳುವ ಖಾಸಗಿ ವ್ಯಕ್ತಿಗಳನ್ನು ಸಮರ್ಥಿಸಿಕೊಂಡಿದ್ದೀರಿ. ತನ್ಮೂಲಕ ಸಂತ್ರಸ್ತರಿಗೆ ಕಾನೂನು ನೆರವು ಮತ್ತು ರಕ್ಷಣೆಯನ್ನು ನಿರಾಕರಿಸಿದ್ದು ಮಾತ್ರವಲ್ಲ,ಅವರನ್ನು ಸಂಪೂರ್ಣವಾಗಿ ಕಾನೂನುಬಾಹಿರ ಶಕ್ತಿಗಳಿಗೆ ಬಿಟ್ಟುಕೊಟ್ಟಿದ್ದೀರಿ. ಪ್ರತಿಯೊಂದು ‘ಕ್ರಿಯೆ’ಗೂ ‘ಪ್ರತಿಕ್ರಿಯೆ ’ಇರುತ್ತದೆ ಎಂದು ಹೇಳುವ ಮೂಲಕ ಅನೈತಿಕ ಪೊಲೀಸ್ಗಿರಿಯ ಹೆಸರಿನಲ್ಲಿ ಹಿಂಸಾತ್ಮಕ ಪ್ರತಿಕ್ರಿಯೆಗಳನ್ನು ಸಮರ್ಥಿಸಿಕೊಂಡಿದ್ದೀರಿ ಎಂದು ಎಐಎಲ್ಎಜೆ ಹೇಳಿದೆ.

ಮುಖ್ಯಮಂತ್ರಿಗಳ ಹೇಳಿಕೆಗಳು ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗಿವೆ ಮತ್ತು ಪ್ರಬಲ ಜಾತಿ ಮತ್ತು ಧಾರ್ಮಿಕ ಸಮುದಾಯಗಳ ಸಾಮಾಜಿಕ ನೈತಿಕತೆಗೆ ಇಂಬು ನೀಡುತ್ತವೆ. ವಾಸ್ತವದಲ್ಲಿ ಈ ಹೇಳಿಕೆಗಳು ಗುಂಪು ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ನಿಗ್ರಹಿಸಲು ಸವೋಚ್ಚ ನ್ಯಾಯಾಲಯವು ನೀಡಿರುವ ನಿರ್ದೇಶಗಳಿಗೆ ವಿರುದ್ಧವಾಗಿವೆ ಎಂದು ನೋಟಿಸಿನಲ್ಲಿ ಬೆಟ್ಟು ಮಾಡಲಾಗಿದೆ.

  ಹೇಳಿಕೆಗಳನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿರುವ ಎಐಎಲ್ಎಜೆ,ಇದಕ್ಕೆ ವಿಫಲವಾದರೆ ತಾನು ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News