ಅ. 25ರಿಂದ ದ.ಕ.ಜಿಲ್ಲೆಯಲ್ಲೂ 1ನೇ ತರಗತಿಯಿಂದ ಶಾಲಾರಂಭ: ಡಿಸಿ ಡಾ. ರಾಜೇಂದ್ರ

Update: 2021-10-18 15:05 GMT
ಡಾ.ಕೆ.ವಿ. ರಾಜೇಂದ್ರ

ಮಂಗಳೂರು, ಅ.18: ಕೋವಿಡ್ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯಿಂದ ನೀಡಲಾದ ‘ಎಸ್‌ಒಪಿ’ ಪಾಲಿಸುವುದರೊಂದಿಗೆ ಅ.25ರಿಂದ 1ನೇ ತರಗತಿಯಿಂದ 5ನೇ ತರಗತಿವರೆಗಿನ ಶಾಲೆ ತೆರೆಯಲು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ಭೌತಿಕ ತರಗತಿಗಳಿಗೆ ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಪ್ರವೇಶದ ಸಮಯದಲ್ಲಿ ಕೋವಿಡ್ ಸೋಂಕು ಲಕ್ಷಣಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಶೇ.50ರಷ್ಟು ಸಾಮರ್ಥ್ಯಕ್ಕೆ ಅನುಗುಣವಾಗಿ ತರಗತಿ ನಡೆಸಬೇಕು. ಹ್ಯಾಂಡ್ ಸ್ಯಾನಿಟೈಜರ್ ಒದಗಿಸುವುದು, ಕನಿಷ್ಠ ಒಂದು ಮೀಟರ್ ದೈಹಿಕ ಅಂತರ ಕಾಯ್ದುಕೊಳ್ಳುವುದು, ವಿಶೇಷವಾಗಿ ಶಾಲಾ ಪ್ರವೇಶ ಮತ್ತು ನಿರ್ಗಮನದಲ್ಲಿ ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು.

ಪ್ರತಿದಿನ ಶೇ.1ರಷ್ಟು ಸೋಡಿಯಂ ಹೈಪೋಕ್ಲೊರೈಟ್ ದ್ರಾವಣವನ್ನು ಬಳಸಿ ತರಗತಿ ಕೊಠಡಿಗಳು ಮತ್ತು ವಿಶ್ರಾಂತಿ ಕೊಠಡಿ ಗಳನ್ನು ಸೋಂಕು ರಹಿತಗೊಳಿಸಬೇಕು. 1ರಿಂದ 5ನೇ ತರಗತಿವರೆಗೆ ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿದ ಶಿಕ್ಷಕರು ಮತ್ತು ಸಿಬ್ಬಂದಿಗೆ ಮಾತ್ರ ಅನುಮತಿಸಲಾಗಿದೆ. 50ಕ್ಕಿಂತ ಮೇಲ್ಪಟ್ಟ ಶಿಕ್ಷಕರು ಫೇಸ್‌ಶೀಲ್ಡ್‌ನ್ನು ಹೆಚ್ಚುವರಿಯಾಗಿ ಬಳಸಬೇಕು. ತರಗತಿ ನಡೆಸುವ ವಿಚಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯಿಂದ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ಈಜುಕೊಳ: ಈಜು ಕೊಳಗಳನ್ನು ಪ್ರತಿ ಬ್ಯಾಚ್‌ನ ಶೇ.50ರ ಸಾಮರ್ಥ್ಯಕ್ಕೆ ಸೀಮಿತಗೊಳಿಸಿ ಅನುಮತಿಸಿದೆ. ಅನುಮತಿ ಸಬಹುದಾದ ಸಂಖ್ಯೆಯನ್ನು ಪ್ರವೇಶ ದ್ವಾರದಲ್ಲಿ ಪ್ರದರ್ಶಿಸಬೇಕು. ಪ್ರವೇಶದ ಸಮಯದಲ್ಲಿ ಎಲ್ಲ ಜ್ವರ, ಉಸಿರಾಟದ ಲಕ್ಷಣ ಗಳನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು. ರೋಗ ಲಕ್ಷಣ ರಹಿತರಿಗೆ ಮಾತ್ರವೇ ಈಜುಕೊಳ ಬಳಸಲು ಅವಕಾಶ ನೀಡಬೇಕು. ಪ್ರತಿ ಬ್ಯಾಚ್‌ನ ನಂತರ ಈಜುಗಾರರು ಬಳಸುವ ವಿಶ್ರಾಂತಿ ಕೊಠಡಿಗಳು, ಕಾಲುದಾರಿಗಳು ಮತ್ತು ಇತರ ಸಾಮಾನ್ಯ ಪ್ರದೇಶಗಳನ್ನು ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಬಳಸಿ ಸೋಂಕು ರಹಿತಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News