ಪುತ್ತೂರು: ಭಾರತೀಯ ಕಿಸಾನ್ ಸಂಘದಿಂದ ಸಾಲಮನ್ನಾ ವಂಚಿತರ ಸಭೆ

Update: 2021-10-18 16:32 GMT

ಪುತ್ತೂರು: ಭಾರತೀಯ ಕಿಸಾನ್ ಸಂಘದ ವತಿಯಿಂದ ಸಾಲಮನ್ನಾ ವಂಚಿತರ ಸಭೆ ಸೋಮವಾರ ನರಿಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಸ್.ಡಿ.ನಾರಾಯಣ ಭಟ್ ಚಂದುಕೂಡ್ಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ನರಿಮೊಗರು ಹಾಗೂ ಶಾಂತಿಗೋಡು ಗ್ರಾಮದ ರೈತರು ನರಿಮೊಗರು ಕೃಷಿಪತ್ತಿನ ಸಹಕಾರಿ ಸಂಘದಿಂದ ಪಡೆದ ಕೃಷಿ ಸಾಲಮನ್ನಾ ಆಗದ ಹಿನ್ನಲೆಯಲ್ಲಿ ನ.8 ರಂದು ಮಿನಿ ವಿಧಾನಸೌಧದ ಎದುರು ಸತ್ಯಾಗ್ರಹ ನಡೆಸುವುದೆಂದು ತೀರ್ಮಾನಿ ಸಲಾಯಿತು. 

ನರಿಮೊಗರು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 777 ಸದಸ್ಯರಿದ್ದು, 404 ಮಂದಿಗೆ ಸಾಲಮನ್ನಾ ಆಗಿದೆ. ಮೂವರ ಹೆಸರು ಹಸಿರು ಪಟ್ಟಿಯಲ್ಲಿ ಕೇಳಿ ಬಂದಿದೆ. ಸುಮಾರು 250 ಮಂದಿಗೆ ಸಾಲಮನ್ನಾ ಬಾಕಿಯಿದೆ. ಈ ನಿಟ್ಟಿನಲ್ಲಿ ನರಿಮೊಗರು ಕೃಷಿಪತ್ತಿನ ಸಹಕಾರಿ ಸಂಘದ ಈ ಸದಸ್ಯರ ಖಾತೆಗೆ ಅ.31 ರೊಳಗೆ ಸಾಲಮನ್ನಾ ಹಣ ಒಂದು ಲಕ್ಷ ರೂ. ಜಮೆಯಾಗಬೇಕು. ಇಲ್ಲದಿದ್ದಲ್ಲಿ ನ.8 ರಂದು ನರಿಮೊಗರು, ಶಾಂತಿಗೋಡು ಭಾಗದ ರೈತರು ಸಂಘದ ವಠಾರದಿಂದ ಮಿನಿ ವಿಧಾನಸೌಧದ ವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಸತ್ಯಾಗ್ರಹ ನಡೆಸುವುದೆಂದು ತೀರ್ಮಾನಿಸಲಾಯಿತು.

ಹೋರಾಟದ ನಿಟ್ಟಿನಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನರಿಮೊಗರು ಹಾಗೂ ಶಾಂತಿಗೋಡು ಗ್ರಾಮ ಸಮಿತಿಯನ್ನು ರಚಿಸಿ ಅಧ್ಯಕ್ಷ, ಕಾರ್ಯದರ್ಶಿಗಳನ್ನು ಸಭೆಯಲ್ಲಿ ನೇಮಕ ಮಾಡಲಾಯಿತು.

ಸಾಲಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಅಧಿಕಾರಿ ಬಳಿ ಕಿಸಾನ್ ಸಂಘ ಸಹಿತ ರೈತರ ನಿಯೋಗ ತೆರಳಿದ ಸಂದರ್ಭ ಉಡಾಫೆಯಾಗಿ ವರ್ತಿಸಿದ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಹಕ್ಕೊತ್ತಾಯದ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಪ್ರಸ್ತಾಪವಾದ ನಿರ್ಣಯಗಳ ಪ್ರತಿಯನ್ನು ಶಾಸಕರು, ಸಹಾಯಕ ಆಯುಕ್ತರು, ತಹಶೀಲ್ದಾರ್ ಅವರಿಗೆ ಮನವಿ ನೀಡುವುದೆಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ನರಿಮೊಗರು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ, ಈಗಾಗಲೇ ರೈತರು ನೀಡಿದ ದಾಖಲೆಗಳನ್ನು ಸರಕಾರಕ್ಕೆ ನಾವು ಕಳುಹಿಸಿಕೊಟ್ಟಿದ್ದೇವೆ. ಈ ವಿಚಾರದಲ್ಲಿ ಸಹಕಾರಿ ಸಂಘದ ತಪ್ಪಿಲ್ಲ. ಇನ್ನು ಮುಂದಿನ ಹೋರಾಟಕ್ಕೆ ಬೇಕಾದ ಖರ್ಚು ವೆಚ್ಚಗಳು, ವ್ಯವಸ್ಥೆಗಳನ್ನು ನಮ್ಮ ಸಂಘದ ಆಡಳಿತ ಮಂಡಳಿ ವತಿಯಿಂದ ಭರಿಸುವ ಸಹಕಾರ ನೀಡಲಿದ್ದೇವೆ ಎಂದು ತಿಳಿಸಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ಬಿ.ಎಸ್. ಸಾಲಮನ್ನಾ ಹಾಗೂ ಮುಂದಿನ ಹೋರಾಟದ ಕುರಿತು ತಿಳಿಸಿದರು. ವೇದಿಕೆಯಲ್ಲಿ ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ ಧನಂಜಯ ಉಪಸ್ಥಿತರಿದ್ದರು. ಶಾಂತಿಗೋಡು ಗ್ರಾಮ ಸಮಿತಿಯ ಕಾರ್ಯದರ್ಶಿ ವಿಶ್ವನಾಥ ಬಲ್ಯಾಯ ಸ್ವಾಗತಿಸಿದರು. ಅವಿನಾಶ್ ಕೊಡಂಕಿರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News