ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯಲಿ : ಹರೀಶ್ ಕುಮಾರ್

Update: 2021-10-18 17:05 GMT

ಮಂಗಳೂರು, ಅ.18: ಕರಾವಳಿ ಜಿಲ್ಲೆಯಲ್ಲಿ ಭತ್ತ ಬೆಳೆ ಕಟಾವು ಆರಂಭಗೊಂಡಿದ್ದು, ಚಂಡಮಾರುತದಿಂದ ಭತ್ತ ಕೃಷಿ ಭಾರೀ ನಷ್ಟವಾಗಿದೆ. ಈ ಮಧ್ಯೆ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ಕಡಿಮೆ ಬೆಲೆಗೆ ಭತ್ತ ಖರೀದಿಸುತ್ತಿದ್ದು, ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ಸರಕಾರ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯಲು ನಿರ್ದೇಶನ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಈ ವಷರ್ 11,747 ಹೆಕ್ಟೇರ್ ಭತ್ತ ಕೃಷಿ, ಉಡುಪಿ ಜಿಲ್ಲೆಯಲ್ಲಿ 35,726 ಹೆಕ್ಟೇರ್ ಕೃಷಿ ಮಾಡಲಾಗಿದೆ. ಒಂದು ವಾರದಿಂದ ವಾಯುಭಾರ ಕುಸಿತದಿಂದಾಗಿ ಯಥೇಚ್ಛ ಮಳೆಯಾಗಿದೆ. ಇದರಿಂದ ಕರಾವಳಿ ಜಿಲ್ಲೆಯಲ್ಲಿ ಭತ್ತ ಕೃಷಿಗೆ ಅಪಾರ ನಷ್ಟವಾಗಿದೆ. ಕೂಡಲೇ ಸರಕಾರ ಬೆಂಬಲ ಬೆಲೆ ಘೋಷಿಸಿದರೆ ಅನುಕೂಲವಾದೀತು ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಭತ್ತ ಕ್ವಿಂಟಾಲ್‌ಗೆ 2500ಕ್ಕೂ ಅಧಿಕ ಬೆಂಬಲ ಬೆಲೆ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಇದು ಅಸಾಧ್ಯವೇಕೆ? ಗಂಗಾವತಿಯಲ್ಲಿ ಈಗ ಭತ್ತ ಕ್ವಿಂಟಾಲ್‌ಗೆ 1800 ರೂ. ದರವಿದ್ದರೆ, ಕರಾವಳಿಯಲ್ಲಿ 1500ರೂ.ಕ್ಕೆ ಖರೀದಿ ಮಾಡಲಾಗುತ್ತಿದೆ. ಈ ಕಾರಣದಿಂದ ಕೂಡಲೇ ಸರಕಾರ ಬೆಂಬಲ ಬೆಲೆ ಘೋಷಿಸಿ, ಎಲ್ಲ ಜಿಲ್ಲೆಗಳಲ್ಲೂ ಖರೀದಿ ಕೇಂದ್ರ ತೆರೆಯಲಿ. ಒಂದು ವೇಳೆ ಸರಕಾರ ನಿರ್ಲಕ್ಷ ವಹಿಸಿದರೆ ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ ಭತ್ತದ ಬೆಳೆ ಮತ್ತಷ್ಟು ಕ್ಷೀಣಗೊಳ್ಳಲಿದೆ ಎಂದು ಎಚ್ಚರಿಸಿದರು.

ಶಾಸಕರು ಒತ್ತಡ ತರಲಿ: ಕರಾವಳಿಯಲ್ಲಿ ಈ ಬಾರಿ ಹಡಿಲು ಭೂಮಿ ಕೃಷಿಗೆ ಶಾಸಕರು, ಅಧಿಕಾರಿಗಳು ಆಸಕ್ತಿ ವಹಿಸಿದ ಕಾರಣ ಭತ್ತ ಬೆಳೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಆದರೆ ಚಂಡಮಾರುತ ಪರಿಣಾಮ ಭತ್ತ ಬೆಳೆದವರು ಸಂಕಷ್ಟಕ್ಕೆ ಸಿಲುಕಿದ್ದು, ಶಾಸಕರು ಕೂಡಲೇ ರಾಜ್ಯ ಸರಕಾರ ಬೆಂಬಲ ಬೆಲೆ ಘೋಷಣೆಗೆ ಒತ್ತಡ ಹಾಕಬೇಕಾಗಿದೆ. ಇದಕ್ಕೆ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಹರೀಶ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News