ಕಾಪು: ವಿಕಲಚೇತನರಿಗೆ ಸರ್ಕಾರದ ಸವಲತ್ತು ದೊರಕಿಸಿ ಕೊಡಲು ಕರೆ

Update: 2021-10-18 17:13 GMT

ಕಾಪು: ಸೌಲಭ್ಯ ವಂಚಿತ ವಿಕಲಚೇತನರನ್ನು ಗುರುತಿಸಿ, ಅವರಿಗೆ ಸರ್ಕಾರದ ಸವಲತ್ತುಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕಾಪು ತಾಲ್ಲೂಕು ಅಂಗವಿಕಲ ಚೇತನರ ಘಟಕವು ಕಾರ್ಯನಿರ್ವಹಿಸಬೇಕಿದ್ದು, ಅದಕ್ಕೆ ಬೇಕಾಗುವ ಪೂರ್ಣ ಸಹಕಾರವನ್ನು ನೀಡುವುದಾಗಿ ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ರವಿವಾರ ಕಾಪು ಶ್ರೀ ವೀರಭದ್ರ ದೇವಸ್ಥಾನದ ಸಭಾಭವನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಪು ತಾಲೂಕು ಅಂಗವಿಕಲ ಚೇತನರ ಘಟಕವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಅಂಗವೈಕಲ್ಯ ಶಾಪವಲ್ಲ, ದೇವರ ಸೃಷ್ಟಿ. ವಿಕಲಚೇತನರು ಕೂಡಾ ಮನುಷ್ಯ ಜೀವನದ ಭಾಗವೇ ಆಗಿದ್ದಾರೆ. ವಿಕಲಚೇತನರನ್ನು ಎಲ್ಲರೂ ನಮ್ಮಂತೆಯೇ ಎಂದು ತಿಳಿದು ಅವರನ್ನು ಪ್ರೋತ್ಸಾಹಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಪು ತಾಲ್ಲೂಕು ವಿಕಲಚೇತನರ ಘಟಕದ ಅಧ್ಯಕ್ಷ ದಯಾನಂದ ಮೂಳೂರು ಮಾತನಾಡಿ, ನಾವು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಈ ನಿಟ್ಟಿನಲ್ಲಿ ತಾಲ್ಲೂಕು ವಿಕಲಚೇತನರ ಸಂಸ್ಥೆ ಪೂರ್ಣ ರೀತಿಯ ಸಹಕಾರ ನೀಡಲಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ರಾಧಾರಮಣ ಶಾಸ್ತ್ರಿ ಕಾಪು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯೋಜಕರಾದ ಜಯಪ್ರಕಾಶ್, ಮಧುಸೂಧನ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಇಲಾಖಾ ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಿದರು.

ಕಾಪು ತಾಲ್ಲೂಕು ಅಂಗವಿಕಲ ಚೇತನರ ಘಟಕದ ಕಾರ್ಯದರ್ಶಿ ಲಕ್ಷ್ಮೀ ಮೂಲ್ಯ ಎಲ್ಲೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ಇಮ್ರಾನ್ ಉಚ್ಚಿಲ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News