ಮ್ಯಾನ್ಮಾರ್: 5 ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರ ಬಿಡುಗಡೆಗೆ ನಿರ್ಧಾರ

Update: 2021-10-18 18:07 GMT

ಯಾಂಗಾನ್, ಅ.18: ಫೆಬ್ರವರಿಯಲ್ಲಿ ನಡೆದ ಸೇನಾಕ್ರಾಂತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಜೈಲುಶಿಕ್ಷೆಗೆ ಗುರಿಯಾಗಿರುವ 5 ಸಾವಿರಕ್ಕೂ ಹೆಚ್ಚು ಜನರನ್ನು ಬಿಡುಗಡೆಗೊಳಿಸಲಾಗುವುದು ಎಂದು ಮ್ಯಾನ್ಮಾರ್ನ ಸೇನಾಡಳಿತದ ಮುಖ್ಯಸ್ಥ ಮಿನ್ ಆಂಗ್ ಹಿಯಾಂಗ್ ಸೋಮವಾರ ಘೋಷಿಸಿದ್ದಾರೆ.

ಅಕ್ಟೋಬರ್ 26ರಿಂದ 28ರವರೆಗೆ ನಡೆಯಲಿರುವ ‘ಅಸೋಸಿಯೇಷನ್ ಆಫ್ ಸೌತ್ಈಸ್ಟ್ ಏಶಿಯನ್ ನೇಷನ್ಸ್(ಆಸಿಯಾನ್) ಶೃಂಗಸಭೆಯಿಂದ ಮಿನ್ಆಂಗ್ ಹಿಯಾಂಗ್ರನ್ನು ಹೊರಗಿರಿಸಿ, ಅವರ ಬದಲು ಮ್ಯಾನ್ಮಾರ್ನ ರಾಜಕೀಯೇತರ ಪ್ರತಿನಿಧಿಯನ್ನು ಆಹ್ವಾನಿಸುವ ಘೋಷಣೆಯ ಬಳಿಕ , ಸೇನಾಡಳಿತ ಈ ಕ್ರಮಕ್ಕೆ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆಸಿಯಾನ್ ಸೂಚಿಸಿದ್ದ 5 ಅಂಶಗಳ ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ಪ್ರಗತಿಯಾಗದಿರುವುದು ಹಾಗೂ ಮ್ಯಾನ್ಮಾರ್ನಲ್ಲಿ ಎಲ್ಲಾ ಪಕ್ಷದವರನ್ನೂ ಸೇರಿಸಿಕೊಂಡು ರಚನಾತ್ಮಕ ಸಂವಾದ ಕಾರ್ಯ ಆರಂಭವಾಗದಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸದಸ್ಯ ರಾಷ್ಟ್ರಗಳು ಶಿಫಾರಸು ಮಾಡಿವೆ ಎಂದು ಆಸಿಯಾನ್ನ ಪ್ರಸಕ್ತ ಅಧ್ಯಕ್ಷದೇಶ ಬ್ರೂನೈ ಹೇಳಿಕೆ ನೀಡಿತ್ತು.


 ಫೆಬ್ರವರಿಯಲ್ಲಿ ಮ್ಯಾನ್ಮಾರ್ ಸೇನೆ ನಡೆಸಿದ್ದ ಕ್ಷಿಪ್ರಕ್ರಾಂತಿಯಲ್ಲಿ ಪ್ರಜಾಪ್ರಭುತ್ವ ಸರಕಾರವನ್ನು ವಜಾಗೊಳಿಸಿ ದೇಶದ ಆಡಳಿತವನ್ನು ಸೇನೆ ಕೈಗೆತ್ತಿಕೊಂಡಿತ್ತು. ಇದನ್ನು ವಿರೋಧಿಸಿ ದೇಶದಾದ್ಯಂತ ಭುಗಿಲೆದ್ದ ಪ್ರತಿಭಟನೆಯನ್ನು ನಿಗ್ರಹಿಸಲು ಸೇನಾಡಳಿತ ಕೈಗೊಂಡ ಕಾರ್ಯಾಚರಣೆಯಲ್ಲಿ 1,100ಕ್ಕೂ ಅಧಿಕ ಪ್ರಜೆಗಳು ಹತರಾಗಿದ್ದರು ಮತ್ತು 8000ಕ್ಕೂ ಅಧಿಕ ಮಂದಿಯನ್ನು ಜೈಲಿಗಟ್ಟಲಾಗಿತ್ತು. ಪತ್ರಕರ್ತರೂ ಸೇರಿದಂತೆ 2000ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಜುಲೈಯಲ್ಲಿ ಬಿಡುಗಡೆಗೊಳಿಸಲಾಗಿದೆ. ಮ್ಯಾನ್ಮಾರ್ನ ಜೈಲಿನಲ್ಲಿ ಅಮೆರಿಕದ ಪತ್ರಕರ್ತ ಡ್ಯಾನಿ ಫೆನ್ಸ್ಸ್ಟರ್ ಸಹಿತ ಇನ್ನೂ ಸುಮಾರು 7,300 ಪ್ರತಿಭಟನಾಕಾರರು ಬಂಧನದಲ್ಲಿದ್ದಾರೆ ಎಂದು ‘ಅಸಿಸ್ಟೆನ್ಸ್ ಅಸೋಸಿಯೇಷನ್ ಆಫ್ ಪೊಲಿಟಿಕಲ್ ಪ್ರಿಸನರ್ಸ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News