ತುರ್ತು ಬಳಕೆ ಪಟ್ಟಿಗೆ ಕೊವ್ಯಾಕ್ಸಿನ್ ಲಸಿಕೆ ಸೇರ್ಪಡೆ ಬಗ್ಗೆ ಪರಿಶೀಲನೆಗೆ ಅ.26ರಂದು ಸಭೆ: ವಿಶ್ವ ಆರೋಗ್ಯ ಸಂಸ್ಥೆ

Update: 2021-10-18 18:34 GMT

ವಿಶ್ವಸಂಸ್ಥೆ, ಅ.18: ಭಾರತದ ಕೊವ್ಯಾಕ್ಸಿನ್ ಲಸಿಕೆಯನ್ನು ಕೊರೋನ ವಿರುದ್ಧದ ತುರ್ತು ಬಳಕೆಯ ಔಷಧದ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಪರಿಶೀಲಿಸಲು ವಿಶ್ವ ಆರೋಗ್ಯಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ ಅಕ್ಟೋಬರ್ 26ರಂದು ನಡೆಯಲಿದೆ ಎಂದು ವಿಶ್ವ ಆರೋಗ್ಯಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಕೊವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಯ ಪಟ್ಟಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಆಸಕ್ತಿಯ ಅಭಿವ್ಯಕ್ತಿ ಪತ್ರವನ್ನು ಕೊವ್ಯಾಕ್ಸಿನ್ ಉತ್ಪಾದಿಸುವ ಸಂಸ್ಥೆಯಾದ ಹೈದರಾಬಾದ್ ಮೂಲದ ಭಾರತ್ ಬಯೊಟೆಕ್ ಎಪ್ರಿಲ್ 19ರಂದು ವಿಶ್ವ ಆರೋಗ್ಯ ಸಂಸ್ಥೆಗೆ ರವಾನಿಸಿದೆ. ಈ ಬಗ್ಗೆ ಪರಿಶೀಲಿಸಲು ಅಕ್ಟೋಬರ್ 26ರಂದು ಸಭೆ ನಡೆಯಲಿದೆ ಎಂದು ಸೌಮ್ಯಾ ಸ್ವಾಮಿನಾಥನ್ ಟ್ವೀಟ್ ಮಾಡಿದ್ದಾರೆ.

ದಾಖಲೆಪತ್ರ ಪೂರ್ಣಗೊಳಿಸುವ ಬಗ್ಗೆ ವಿಶ್ವ ಆರೋಗ್ಯಸಂಸ್ಥೆ ಭಾರತ್ ಬಯೊಟೆಕ್ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ತುರ್ತು ಬಳಕೆಯ ಪಟ್ಟಿಯಲ್ಲಿ ಹಲವು ಲಸಿಕೆಗಳನ್ನು ಒಳಗೊಳಿಸುವ ಮತ್ತು ಈ ಮೂಲಕ ಜಗತ್ತಿನೆಲ್ಲೆಡೆ ಲಸಿಕೆ ಪೂರೈಸುವ ಉದ್ದೇಶ ನಮ್ಮದಾಗಿದೆ ಎಂದವರು ಹೇಳಿದ್ದಾರೆ.

ಎಪ್ರಿಲ್ 19ರಂದು ಭಾರತ್ ಬಯೊಟೆಕ್ ದಾಖಲೆಪತ್ರ ಒದಗಿಸಿದ್ದು ವಿಶ್ವ ಆರೋಗ್ಯಸಂಸ್ಥೆಯ ಕೋರಿಕೆಯ ಮೇರೆಗೆ ಸೆಪ್ಟಂಬರ್ 27ರಂದು ಹೆಚ್ಚುವರಿ ಮಾಹಿತಿ ಒದಗಿಸಿದೆ. ಇದನ್ನು ವಿಶ್ವ ಆರೋಗ್ಯಸಂಸ್ಥೆಯ ತಜ್ಞರು ಪರಿಶೀಲಿಸುತ್ತಿದ್ದು ಒಂದು ವೇಳೆ ಎಲ್ಲಾ ಅಂಶಗಳು ತೃಪ್ತಿಕರವಾಗಿದ್ದರೆ, ಮುಂದಿನ ವಾರ ಪರಿಶೀಲನೆ ಅಂತಿಮಗೊಳಿಸಲಾಗುವುದು ಎಂದು ಅಕ್ಟೋಬರ್ ಪ್ರಥಮ ವಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿತ್ತು.

ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಕೊರೋನ ವಿರುದ್ಧದ ತುರ್ತು ಬಳಕೆಗೆ ಅನುಮೋದಿಸಿದ 6 ಲಸಿಕೆಗಳಲ್ಲಿ ಕೊವ್ಯಾಕ್ಸಿನ್ ಲಸಿಕೆಯೂ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News