ಅಗ್ರ 10ರ ಸ್ಥಾನದಿಂದ ಹೊರಬಿದ್ದ ರೋಜರ್ ಫೆಡರರ್

Update: 2021-10-19 12:37 GMT

ಲಂಡನ್, ಅ. 18: ಸೋಮವಾರ ಬಿಡುಗಡೆ ಗೊಂಡ ಎಟಿಪಿ ರ್ಯಾಂಕಿಂಗ್ಸ್‌ನಲ್ಲಿ ರೋಜರ್ ಫೆಡರರ್ ಅಗ್ರ 10ರ ಸ್ಥಾನದಿಂದ ಹೊರಬಿದ್ದಿದ್ದಾರೆ. 40 ವರ್ಷದ ಫೆಡರರ್ ಅಗ್ರ 10ರ ಸ್ಥಾನದಿಂದ ಹೊರಬೀಳುತ್ತಿರುವುದು ಸುಮಾರು ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಯಾಗಿದೆ. ಅವರೀಗ 11ನೇ ಸ್ಥಾನದಲ್ಲಿದ್ದಾರೆ.

ಜುಲೈನಲ್ಲಿ ನಡೆದ ವಿಂಬಲ್ಡನ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್‌ನಲ್ಲಿ ಹ್ಯೂಬರ್ಟ್ ಹರ್ಕಝ್ ವಿರುದ್ಧ ಸೋತ ಬಳಿಕ ಫೆಡರರ್ ಟೆನಿಸ್ ಆಡಿಲ್ಲ. ಅವರು ಮೊಣಗಂಟು ನೋವಿನಿಂದ ಬಳಲುತ್ತಿದ್ದಾರೆ.

ಕಳೆದ ವಾರ ಇಂಡಿಯನ್‌ವೆಲ್ಸ್ ಓಪನ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆಗೊಂಡಿದ್ದ ಪೋಲ್ಯಾಂಡ್‌ನ ಹರ್ಕಝ್ ಎರಡು ಸ್ಥಾನ ಮೇಲೇರಿ 10ನೇ ಸ್ಥಾನ ಸಂಪಾದಿಸಿದ್ದಾರೆ. ರವಿವಾರ ನಡೆದ ಇಂಡಿಯನ್‌ವೆಲ್ಸ್ ಪಂದ್ಯಾವಳಿಯ ಫೈನಲ್‌ನಲ್ಲಿ ಜಾರ್ಜಿಯದ ನಿಕೊಲೊಝ್ ಬಸಿಲಶ್ವಿಲಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದ ಬ್ರಿಟನ್‌ನ ಕ್ಯಾಮರೂನ್ ನೋರೀ 10 ಸ್ಥಾನಗಳಷ್ಟು ಮೇಲಕ್ಕೇರಿ 15ನೇ ಸ್ಥಾನ ಗಳಿಸಿದ್ದಾರೆ.

ಅವರದೇ ದೇಶದ ಆ್ಯಂಡಿ ಮರ್ರೆ 51 ಸ್ಥಾನಗಳಷ್ಟು ಕೆಳಗೆ ಜಾರಿ 172ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವರು ಕಳೆದ ವಾರ ಇಂಡಿಯನ್‌ವೆಲ್ಸ್‌ನಲ್ಲಿ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧ ಸೋಲನುಭವಿಸಿದರು. ಝ್ವೆರೆವ್ ನಾಲ್ಕನೇ ಸ್ಥಾನವನ್ನು ಹೊಂದಿದ್ದಾರೆ.

ಸರ್ಬಿಯದ ನೊವಾಕ್ ಜೊಕೊವಿಕ್ ಪ್ರಥಮ ಸ್ಥಾನದಲ್ಲಿ ಮುಂದುವರಿದರೆ, ರಶ್ಯದ ಡನೀಲ್ ಮೆಡ್ವೆಡೆವ್ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಾಸ್ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News