ಆರ್ಯನ್ ಖಾನ್ ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸಿ:ಸುಪ್ರೀಂ ಕೋರ್ಟ್‌ಗೆ ಶಿವಸೇನ ನಾಯಕ ಮನವಿ

Update: 2021-10-19 06:49 GMT

ಮುಂಬೈ: ಆರ್ಯನ್ ಖಾನ್ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಹಾಗೂ  ಅವರು ಮಾದಕದ್ರವ್ಯ ನಿಯಂತ್ರಣ ಬ್ಯೂರೋದ (ಎನ್ಸಿಬಿ) ಅಧಿಕಾರಿಯಿಂದ ಪ್ರತೀಕಾರಕ್ಕೆ ಬಲಿಯಾಗಿದ್ದಾರೆ ಎಂದು ಶಿವಸೇನೆಯ ಮುಖಂಡರೊಬ್ಬರು ಸುಪ್ರೀಂಕೋರ್ಟ್ ನಲ್ಲಿ ಮನವಿ ಮಾಡಿದ್ದಾರೆ.

ಶಿವಸೇನಾ ನಾಯಕ ಹಾಗೂ ರಾಜ್ಯ ಸಚಿವ ಕಿಶೋರ್ ತಿವಾರಿ  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರೊಂದಿಗೆ ಮುಂಬೈ ಡ್ರಗ್ಸ್  ಪ್ರಕರಣದಲ್ಲಿ ರಾಜಕೀಯ ಪ್ರವೇಶಿಸಿದಂತಾಗಿದೆ.  ಈ ತಿಂಗಳಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಇತರ ಏಳು ಮಂದಿಯೊಂದಿಗೆ ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಆಡಳಿತ ಮೈತ್ರಿಕೂಟ ವಿಶೇಷವಾಗಿ ಶಿವಸೇನೆ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಕೇಂದ್ರದ ಆದೇಶದ ಮೇರೆಗೆ ಎನ್ ಸಿಬಿ ಆರ್ಯನ್ ಖಾನ್ ಅವರನ್ನು ಗುರಿಯಾಗಿಸಿದೆ ಎಂದು ಆರೋಪಿಸಿವೆ.

ಡ್ರಗ್ಸ್ ವಿರೋಧಿ ಏಜೆನ್ಸಿಯು ಚಲನಚಿತ್ರ ವ್ಯಕ್ತಿಗಳು ಹಾಗೂ ಮಾಡಲ್ ಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರವನ್ನು ತೀರಿಸಿಕೊಳ್ಳುತ್ತಿದೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಲು ಹಾಗೂ  ಆರ್ಯನ್ ಖಾನ್ ನ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಕೇಳಿಕೊಳ್ಳುತ್ತೇವೆ ಎಂದು ಕಿಶೋರ್ ತಿವಾರಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

"ಯಾರೋ ಒಬ್ಬರು ಇಷ್ಟು ದಿನ ಡ್ರಗ್ಸ್ ಅಥವಾ ಯಾವುದೇ ಇತರ ಪುರಾವೆಗಳನ್ನು ವಶಪಡಿಸಿಕೊಳ್ಳದೆ ಜೈಲಿನೊಳಗೆ ಇರುವುದು ನಂಬಲಾಗದ ಸಂಗತಿ. ಡ್ರಗ್ಸ್ ಸೇವಿಸಿದ್ದಕ್ಕೆ  ವೈದ್ಯಕೀಯ ವರದಿಯಿಲ್ಲ ಹಾಗಾಗಿ ಅವರು ಡ್ರಗ್ಸ್ ಸೇವನೆ ಮಾಡಿಲ್ಲ"ಎಂದು  ತಿವಾರಿ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.

ಅಕ್ಟೋಬರ್ 2 ರಂದು ಮುಂಬೈನಿಂದ ಗೋವಾಕ್ಕೆ ಹೋಗುವಾಗ ಕ್ರೂಸ್ ಹಡಗಿನಲ್ಲಿ ನಡೆಯುತ್ತಿತ್ತು ಎನ್ನಲಾದ  ರೇವ್ ಪಾರ್ಟಿಯ ಮೇಲೆ ದಾಳಿ ಮಾಡಿದ್ದ ನಂತರ ಎನ್ ಸಿಬಿ 20 ಜನರನ್ನು ಬಂಧಿಸಿತ್ತು.  ಡ್ರಗ್ಸ್ ಪತ್ತೆಯಾಗಿರಲಿಲ್ಲ ಎಂದು ಆರ್ಯನ್ ಖಾನ್ ಅವರ ವಕೀಲರು ಪದೇ ಪದೇ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News