ಕೇರಳದಲ್ಲಿ ಗರ್ಭಿಣಿ ಆನೆಯನ್ನು ಕೊಂದ ಆರೋಪಿ ಒಂದೂವರೆ ವರ್ಷಗಳ ನಂತರ ಶರಣಾಗತಿ

Update: 2021-10-19 08:11 GMT
photo: thenewsminute.com

ತಿರುವನಂತಪುರ: ಅನಾನಸ್‌ನಲ್ಲಿ ತುಂಬಿದ್ದ  ಪಟಾಕಿಯನ್ನು ತಿಂದು ಗರ್ಭಿಣಿ ಆನೆಯೊಂದು ಸಾವಿಗೀಡಾದ ಒಂದು ವರ್ಷದ ನಂತರ ಕಾಡುಪ್ರಾಣಿಗೆ ಬಲೆ ಹಾಕಿದ್ದ ಎರಡನೇ ಆರೋಪಿ ಅ. 16 ರಂದು ಪಾಲಕ್ಕಾಡ್‌ನ ಮಣ್ಣಿಕ್ಕಾಡ್ ಮುನ್ಸಿಫ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

ರಿಯಾಝುದ್ದೀನ್( 38 ವರ್ಷ) ಜೂನ್, 2020 ರಿಂದ ತಲೆಮರೆಸಿಕೊಂಡಿದ್ದ. ಸುಮಾರು ಒಂದೂವರೆ ವರ್ಷಗಳ ನಂತರ ಶರಣಾಗಿದ್ದಾನೆ. ರಿಯಾಝುದ್ದೀನ್  ತಂದೆ ಅಬ್ದುಲ್ ಕರೀಂ ಪ್ರಕರಣದ ಮೊದಲ ಆರೋಪಿಯಾಗಿದ್ದು ಆತ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಮೃತ ಗರ್ಭಿಣಿ ಆನೆಯು  ಪಾಲಕ್ಕಾಡ್‌ನ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ್ದು ಪಾಲಕ್ಕಾಡ್-ಮಲಪ್ಪುರಂ ಗಡಿ ಸಮೀಪದ ಅರಣ್ಯ ಪ್ರದೇಶದಲ್ಲಿ ಹಣ್ಣುಗಳನ್ನು ತಿಂದಿತ್ತು. ಹೆಣ್ಣಾನೆ ಪಟಾಕಿಗಳನ್ನು ತುಂಬಿದ್ದ ಹಣ್ಣನ್ನು ಕಚ್ಚಿದ ನಂತರ ತೀವ್ರವಾಗಿ ಗಾಯಗೊಂಡಿತ್ತು.

ಆನೆಯು ನದಿಯಲ್ಲಿ ಮೃತಪಟ್ಟಿತ್ತು. ಆನೆಯ  ಸಾವಿಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಅಂತಾರಾಷ್ಟ್ರೀಯ ಪ್ರಾಣಿ ಕಲ್ಯಾಣ ಚಾರಿಟಿ, ವಿಶ್ವ ಪ್ರಾಣಿ ಸಂರಕ್ಷಣೆ ಸಂಸ್ಥೆಯು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ  ಸ್ಥಳೀಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ತಪ್ಪಿತಸ್ಥರ ವಿರುದ್ಧ ತ್ವರಿತ ಹಾಗೂ  ಬಲವಾದ ಕ್ರಮ ಕೈಗೊಳ್ಳುವಂತೆ ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News