ಬಂಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಚೈತ್ರಾ ಕುಂದಾಪುರ ಕ್ಷಮೆ ಯಾಚಿಸಲಿ: ಶಕುಂತಳಾ ಶೆಟ್ಟಿ ಒತ್ತಾಯ

Update: 2021-10-19 09:13 GMT

ಮಂಗಳೂರು, ಅ.19: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಚೈತ್ರಾ ಕುಂದಾಪುರ ಎಂಬಾಕೆ ಬಂಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಆಕೆ ಮಾಡಿರುವ ಆರೋಪವನ್ನು ಸಾಬೀತುಪಡಿಸಬೇಕು ಇಲ್ಲವಾದಲ್ಲಿ ಇಡೀ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಒತ್ತಾಯಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಚೈತ್ರಾ ಕುಂದಾಪುರ ಪ್ರಚೋದನಕಾರಿ ಭಾಷಣದ ಜತೆಗೆ ಬಂಟ ಸಮುದಾಯ ಹಾಗೂ ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಬಂಟ ಸಮುದಾಯದವರು ಪಕ್ಷದ ರಾಜ್ಯಾಧ್ಯಕ್ಷರಾಗಿರುವಾಗ, ಆಕೆ ಭಾಷಣ ಮಾಡಿದ ಜಾಗದಲ್ಲಿ ಬಂಟ ಸಮುದಾಯ ಪ್ರತಿನಿಧಿ ಶಾಸಕರಾಗಿರುವಾಗ, ಬಂಟ ಸಮುದಾಯದ ಹೆಣ್ಣು ಮಗಳನ್ನು ಅವಮಾನಿಸಲು ಅವರೇ ಕುಮ್ಮಕ್ಕು ನೀಡಿದ್ದರೇ ಎಂಬುದನ್ನು ಸ್ಪಷ್ಟಪಡಿಸಬೇಕು.

ಇನ್ನೊಬ್ಬರ ಹೆಣ್ಣು ಮಕ್ಕಳ ಬಗ್ಗೆ ಎಲ್ಲಿಂದಲೋ ಬಂದು ಸುರತ್ಕಲ್‌ನಲ್ಲಿ ಮಾತನಾಡಲು ನಿಮಗೆ ಆ ಕ್ಷೇತ್ರದ ಶಾಸಕ ಭರತ್ ಶೆಟ್ಟಿಯವರು ಹೇಳಿರುವರೇ? ಅಥವಾ ಅವರ ವಿರೋಧಿ ಬಣದವರು ಹೇಳಿದ್ದಾರೆಯೇ ಎಂಬುದನ್ನು ಹೇಳಿ. ಮೊದಲು ಹಿಂದೂ ಧರ್ಮ ಬಗ್ಗೆ ತಿಳಿದು ಮಾತನಾಡಿ. ಹೆಣ್ಣು ಮಗಳನ್ನು ಅಮಾನಿಸುವುದು ಹಿಂದೂ ಸಂಸ್ಕೃತಿ ಅಲ್ಲ ಎಂದು ಶಕುಂತಳಾ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಬಿಲ್ಲವ ಸಮುದಾಯದ ಪೂಜನೀಯ ಆಯುಧ ಸುರ್ಯವನ್ನು ತಲವಾರಿಗೆ ಹೋಲಿಕೆ ಮಾಡಿ ಮಾತನಾಡಿದರೂ ಅದೇ ಸಮುದಾಯದದವರಾದ ಬಿಜೆಪಿಯ ಜಿಲ್ಲಾಧ್ಯಕ್ಷರು, ಸಮುದಾಯ ಇಬ್ಬರು ಸಚಿವರು ಮಾನವಾಗಿರುವುದು ಏನನ್ನು ಸೂಚಿಸುತ್ತದೆ. ನೀವು ಮಾತನಾಡುವಾಗ ಅಲ್ಲಿ ಬಿಲ್ಲವ ಯುವಕರು, ಬಂಟ ಯುವಕರು ಇರಲಿಲ್ಲವೇ? ನಾಲಗೆ ಹರಿಬಿಡುವ ವೇಳೆ ಜಾಗೃತೆ ಇರಲಿ ಎಂದು ಚೈತ್ರಾ ಕುಂದಾಪುರ ಹೇಳಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಕುಂತಳಾ ಶೆಟ್ಟಿ, ಬಂಟ ಸಮುದಾಯ ಸೇರಿದಂತೆ ಹಲವು ಸಮುದಾಯಗಳಲ್ಲಿ ವರದಕ್ಷಿಣೆಯಂತಹ ಪಿಡುಗಿನಿಂದ ಬಹಳಷ್ಟು ಮಂದಿ ಹೆಣ್ಣು ಮಕ್ಕಳು ಮದುವೆಯಾಗದೆ ಬಾಕಿ ಆಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿರ್ದಿಷ್ಟ ಸಮುದಾಯದ ಹೆಣ್ಣು ಮಗಳನ್ನು ಗುರಿಯಾಗಿಸಿಕೊಂಡು ಮಾಡಿರುವ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿದರು.

ಏನೇನೋ ಹೇಳಿಕೆ ನೀಡುವ ಬದಲು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಅನಾಚಾರ, ದೌರ್ಜನ್ಯದ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲು ಸರಕಾರವನ್ನು ಒತ್ತಾಯಿಸುವ ಕೆಲಸವನ್ನು ಮಾಡಿ ಎಂದು ಕಿವಿಮಾತು ಹೇಳಿದ ಅವರು, ಜಿಹಾದ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಎರಡು ಹೃದಯಗಳು ಧರ್ಮ ನೋಡಿ ಪ್ರೀತಿಸುವುದಿಲ್ಲ. ತಮ್ಮ ಮಕ್ಕಳು ದಾರಿ ತಪ್ಪುತ್ತಿದ್ದಾರೆಂಬ ಅನುಮಾನ, ಆತಂಕ ಇದ್ದಾಗ ಅವರ ಹೆತ್ತವರಿಗೆ ತಿಳಿಸಿ, ಮಕ್ಕಳ ಮೇಲೆ ನಿಗಾ ಇರಿಸಲು ತಿಳಿಸಿ, ತಪ್ಪು ಆಗಬಹುದು ಎಂದಾಗ ಪೊಲೀಸರಿಗೆ ಮಾಹಿತಿ ನೀಡಿ ಅದು ಬಿಟ್ಟು ಲವ್ ಜಿಹಾದ್ ಹೆಸರಿನಲ್ಲಿ ಅನೈತಿಕ ಪೊಲೀಸ್‌ಗಿರಿಯನ್ನು ಪ್ರದರ್ಶಿಸಬೇಡಿ ಎಂದು ಅವರು ಹೇಳಿದರು.

ಅನೈತಿಕ ಪೊಲೀಸ್‌ಗಿರಿಯನ್ನು ಪ್ರಶ್ನಿಸುವ ಮಹಿಳಾ ನಾಯಕಿಯರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಅವಮಾನಿಸುವ, ನಿಂದಿಸುವುದು, ಮಾನಸಿಕ ಹಿಂಸೆ ನೀಡುವುದು ಹಿಂದೂ ಧರ್ಮದ ಸಂಸ್ಕೃತಿಯಲ್ಲ ಎಂದು ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಾಯಕಿಯರಾದ ಮಮತಾ ಗಟ್ಟಿ, ಅಪ್ಪಿ, ಸುರೇಖಾ ಚಂದ್ರಹಾಸ್, ಚಂದ್ರಕಲಾ, ಮಲ್ಲಿಕಾ, ತನ್ವೀರ್, ಗೀತಾ ಅತ್ತಾವರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News