‘ಇತಿಹಾಸದ ದಾಖಲೀಕರಣದಲ್ಲಿ ಛಾಯಾಚಿತ್ರಗ್ರಾಹಕರು ಅತೀ ಅಗತ್ಯ’
ಉಡುಪಿ, ಅ.19: ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಸಮಾಜವನ್ನು ಕೇವಲ ಒಂದು ಚಿತ್ರದ ಮೂಲಕ ಬಿಂಬಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಫೋಟೋ ಗ್ರಾಫರ್ಸ್ ಸಮಾಜದ ದೃಷ್ಟಿಕೋನವನ್ನು ಅರ್ಥೈಸಿಕೊಂಡು ಧನಾತ್ಮಕ ಚಿತ್ರವನ್ನು ತೆಗೆಯಲು ಪ್ರಯತ್ನಿಸಬೇಕು ಎಂದು ಅಂಬಲಪಾಡಿ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದ್ದಾರೆ.
ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ರವಿವಾರ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಇದರ 31ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇತಿಹಾಸಕಾರರು ಹಾಗೂ ಫೋಟೋಗ್ರಾಫರ್ಸ್ ಒಟ್ಟಾಗಿ ಹೋದರೆ ಮಾತ್ರ ಇತಿಹಾಸ ಪರಿಪೂರ್ಣವಾಗುತ್ತದೆ. ಇಲ್ಲವಾದರೆ ಇತಿಹಾಸ ಕೇವಲ ಬರಹವಾಗಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಫೋಟೋಗ್ರಾಫರ್ಸ್ ತಮ್ಮ ವ್ಯಾಪ್ತಿಯಲ್ಲಿನ ಆಯ್ದ ಪ್ರದೇಶಗಳ, ಘಟನೆ ಬಿಂಬಿಸುವ ಸೇರಿದಂತೆ ಇತರೆ ಚಿತ್ರಗಳನ್ನು ತೆಗೆದು ಅದನ್ನು ಸಂಗ್ರಹಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಸಕ ಕೆ.ರಘುಪತಿ ಭಟ್ ಸಹಾಯಧನ ವಿತರಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಛಾಯಾಚಿತ್ರಗ್ರಾಹಕರನ್ನು ಸನ್ಮಾನಿಸಲಾಯಿತು. ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ, ಕರ್ನಾಟಕ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಪರಮೇಶ್ ಸುಬ್ಬಯ್ಯ, ಸೌತ್‌ಕೆನರಾ ಫೋಟೋಗ್ರಾಫರ್ಸ್ ವಿವಿದ್ಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ವಾಸುದೇವ ರಾವ್, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್, ಕೋಶಾಧಿಕಾರಿ ಆನಂದ ಎನ್. ಉಪಸ್ಥಿತರಿದ್ದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಸ್ವಾಗತಿಸಿದರು. ರಾಘವೇಂದ್ರ ಮತ್ತು ಬಬಿತಾ ಕಾರ್ಯಕ್ರಮ ನಿರೂ ಪಿಸಿದರು.