ಉಡುಪಿ: ಕೋವಿಡ್‌ಗೆ ಓರ್ವ ಬಲಿ; 12 ಮಂದಿಗೆ ಕೊರೋನ ಪಾಸಿಟಿವ್

Update: 2021-10-19 14:10 GMT

ಉಡುಪಿ, ಅ.19: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್-19 ಸೋಂಕಿಗೆ ವೃದ್ಧರೊಬ್ಬರು ಮೃತಪಟ್ಟಿದ್ದು, 12 ಮಂದಿ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ ಎಂಟು ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 47 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಕಾರ್ಕಳದ 71ರ ಹರೆಯದ ವೃದ್ಧರೊಬ್ಬರು ಕೋವಿಡ್‌ನಿಂದ ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಇಲಾಖೆಯ ಬುಲೆಟಿನ್ ತಿಳಿಸಿದೆ. ಕೋವಿಡ್ ಗುಣಲಕ್ಷಣದೊಂದಿಗೆ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದ ಇವರನ್ನು ಅ.12ರಂದು ಆಸ್ಪತ್ರೆಗೆ ದಾಖಲಿಸಿದ್ದು, 18ರಂದು ಚಿಕಿತ್ಸೆಯಿಂದ ಚೇತರಿಸಿಕೊಳ್ಳದೇ ಮೃತಪಟ್ಟರು. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತರ ಸಂಖ್ಯೆ 47ಕ್ಕೇರಿದೆ.

ದಿನದಲ್ಲಿ ಸೋಂಕು ದೃಢಪಟ್ಟ 12 ಮಂದಿಯಲ್ಲಿ ನಾಲ್ವರು ಪುರುಷರು ಹಾಗೂ ಎಂಟು ಮಂದಿ ಮಹಿಳೆಯರು. ಇವರಲ್ಲಿ ಏಳು ಮಂದಿ ಉಡುಪಿ, ನಾಲ್ವರು ಕುಂದಾಪುರ ಹಾಗೂ ಒಬ್ಬರು ಕಾರ್ಕಳ ತಾಲೂಕಿನವರು. ಐದು ಮಂದಿಗೆ ಕೋವಿಡ್ ಆಸ್ಪತ್ರೆಯಲ್ಲಿ ಉಳಿದ ಏಳು ಮಂದಿಗೆ ಅವರವರ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ 8 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 76,078ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3165 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,601ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 11,89,001 ಮಂದಿಯನ್ನು ಕೆವಿಡ್ ಪರೀಕ್ಷೆಗೊಳ ಪಡಿಸಲಾಗಿದೆ.

1612 ಮಂದಿಗೆ ಲಸಿಕೆ: ಇಂದು ಜಿಲ್ಲೆಯಲ್ಲಿ ಒಟ್ಟು 1612 ಮಂದಿ ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ್ದು, ಇವರಲ್ಲಿ 149 ಮಂದಿ ಮೊದಲ ಡೋಸ್ ಹಾಗೂ 1463 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 111 ಮಂದಿ ಮೊದಲ ಡೋಸ್ ಹಾಗೂ 915 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 38 ಮಂದಿ ಮೊದಲ ಡೋಸ್ ಹಾಗೂ 535 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಅಲ್ಲದೇ 6 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 7ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 9,07,371 ಮಂದಿ ಮೊದಲ ಡೋಸ್ ಹಾಗೂ 4,66,200 ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News