ಫ್ರುಟ್ಸ್ ತಂತ್ರಾಂಶದಡಿ ರೈತರ ನೋಂದಣಿ; ಶೇ.48.55 ಪ್ರಗತಿ

Update: 2021-10-19 14:25 GMT

ಉಡುಪಿ, ಅ.19: ಫ್ರುಟ್ಸ್ ತಂತ್ರಾಂಶದಡಿ ಜಿಲ್ಲೆಯ ರೈತರ ಮಾಹಿತಿಗಳನ್ನು ಸಂಗ್ರಹಿಸುವ ಬಗ್ಗೆ ಸರಕಾರದದಿಂದ ಬಂದಿರುವ ನಿರ್ದೇಶನದಂತೆ ಇದುವರೆಗೆ ಜಿಲ್ಲೆಯಲ್ಲಿ ಶೇ.48.55ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ.ತಿಳಿಸಿದ್ದಾರೆ.

ಜಿಲ್ಲೆಯ ಶೇ.48.55ರಷ್ಟು ರೈತರು ಅ.6ರಿಂದ 17ರವರೆಗೆ ಫ್ರುಟ್ಸ್ ತಂತ್ರಾಂಶ ದಡಿ ತಮ್ಮ ಜಾಗದ ನೋಂದಣಿ ಮಾಡಿಕೊಂಡಿದ್ದಾರೆ. ಈ ಅವಧಿಯಲ್ಲಿ 1,07,245 ಜಾಗದ ಫ್ಲಾಟ್‌ಗಳು ನೊಂದಣಿಗೊಂಡಿವೆ. ರೈತರು ಈ ತಂತ್ರಾಂಶದಲ್ಲಿ ತಮ್ಮ ಜಮೀನನ್ನು ನೊಂದಣಿ ಮಾಡಿಸಲು ಉತ್ತಮ ಸ್ಪಂದನೆ ತೋರಿಸುತಿದ್ದಾರೆ ಎಂದೂ ಜಿಲ್ಲಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರಕಾರದ ವಿವಿಧ ಯೋಜನೆಗಳಾದ ಕೃಷಿ ಇಲಾಖೆಯ ಪಿಎಂ-ಕಿಶಾನ್, ಕೆ-ಕಿಶಾನ್ ಯೋಜನೆ, ತೋಟಗಾರಿಕಾ ಇಲಾಖೆಯ ಹಸಿರು ಯೋಜನೆ, ಹೈನುಗಾರಿಕೆ ಹಾಗೂ ಪಶು ಸಂಗೋಪನೆ ಇಲಾಖೆಯ ಯೋಜನೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಯೋಜನೆಗಳು, ರೇಷ್ಮೆ ಇಲಾಖೆ ಯಡಿ ಬರುವ ಯೋಜನೆಗಳು ಹಾಗೂ ಬ್ಯಾಂಕ್‌ಗಳಲ್ಲಿ ನೀಡಲಾಗುವ ಕೃಷಿ ಸಾಲ, ಬೆಳೆ ವಿಮೆ , ರಸಗೊಬ್ಬರ ಪೂರೈಕೆ ಹಾಗೂ ಕಂದಾಯ ಹಾಗೂ ಇತರೆ ಇಲಾಖೆಗಳ ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಸಹಕಾರಿಯಾಗುವಂತೆ ರೈತರ ಜಮೀನಿನ ನಿಖರ ಹಾಗೂ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸುವ ಸಲುವಾಗಿ ಫ್ರುಟ್ಸ್ (ಫಾರ್ಮರ್ಸ್‌ ರಿಜಿಸ್ಟ್ರೇಶನ್ ಎಂಡ್ ಯುನಿಫೈಡ್ ಬೆನಿಫಿಶರಿ ಇನ್‌ಫಾರ್ಮರೇಷನ್ ಸಿಸ್ಟಮ್) ಎಂಬ ತಂತ್ರಾಂಶವನ್ನು ಬಳಸಲಾಗುತ್ತಿದೆ.

ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಸಂಖ್ಯೆಯ ರೈತರು ತಮ್ಮ ಜಮೀನನ್ನು ನೋಂದಣಿ ಮಾಡಿಸಲು ಬಾಕಿ ಇದೆ. ಆದುದರಿಂದ ಇಂಥ ರೈತ ಬಾಂಧವರು ತಮ್ಮ ಆಧಾರ್ ಕಾರ್ಡ್‌ನ ಪ್ರತಿ ಹಾಗೂ ತಮ್ಮ ಮಾಲಕತ್ವದ ಎಲ್ಲಾ ಜಮೀನಿನ ಸರ್ವೇ ನಂಬರ್‌ಗಳ ವಿವರವನ್ನು ತಮ್ಮ ಹತ್ತಿರದ ತಹಶೀಲ್ದಾರರ ಕಛೇರಿ/ ಕಂದಾಯ ನಿರೀಕ್ಷಕರ ಕಛೇರಿ/ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ರೈತ ಸಂಪರ್ಕ ಕೇಂದ್ರ, ನ್ಯಾಯಬೆಲೆ ಅಂಗಡಿ ಅಥವಾ ಕೃಷಿ/ತೋಟಗಾರಿಕೆ/ ರೇಷ್ಮೆ ಇಲಾಖೆ ಕಚೇರಿಗಳಿಗೆ ಕೂಡಲೇ ಒದಗಿಸಿ ತಮ್ಮ ದಾಖಲೆಗಳನ್ನು ಮುಂದಿನ 5 ದಿನಗಳ ಒಳಗಾಗಿ ನೀಡಿ ಫ್ರುಟ್ಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

ಈ ಮಾಹಿತಿಗಳನ್ನು ಸರಕಾರದ ವಿವಿಧ ಇಲಾಖೆಗಳ ಸವಲತ್ತುಗಳನ್ನು ನೀಡಲು ಮಾತ್ರ ಬಳಕೆ ಮಾಡುವುದರಿಂದ ರೈತರು ನಿರ್ಭೀತಿಯಿಂದ ತಮ್ಮ ಜಮೀನಿನ ಮಾಹಿತಿಯನ್ನು ನೀಡಿ ಫ್ರುಟ್ಸ್ ತಂತ್ರಾಂಶದಲ್ಲಿ ಕೂಡಲೇ ನೋಂದಾ ಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News