ಕೊರಗ ಸಮುದಾಯದ ಸಬಲೀಕರಣಕ್ಕೆ 9ನೇ ಹಂತದ ತರಬೇತಿ

Update: 2021-10-19 15:54 GMT

ಬ್ರಹ್ಮಾವರ, ಅ.19: ಕೊರಗ ಸಮುದಾಯದ ಯುವಜನರ ಸಬಲೀಕರಣದ ಒಂಭತ್ತನೇ ಹಂತದ ತರಬೇತಿ ಶಿಬಿರ ತಾಲೂಕಿನ 38ನೇ ಕಳ್ತೂರು ಗ್ರಾಪಂನ ಕಲ್ಲುಗುಡ್ಡೆ ಕೊರಗದ ಹಾಡಿಯ ಕೆಂಜೂರು ಕೊರಗ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು.

ತರಬೇತಿಯನ್ನು ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್‌ಸ್ಟಿಟ್ಯೂಟ್, ಸಮಗ್ರ ಗ್ರಾಮೀಣ ಆಶ್ರಮ ಹಾಗೂ ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. 9ನೇ ಹಂತದ ತರಬೇತಿ ಶಿಬಿರವನ್ನು ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಬಿತಾ ಅವರು ಶಿಬಿರಾರ್ಥಿಗಳಿಗೆ ಪುಸ್ತಕ ನೀಡುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆ ಸಮುಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯ ಅಧಿಕಾರಿ ದೂದ್‌ಪೀರ್, ಬ್ರಹ್ಮಾವರ ತಾಪಂನ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಇಬ್ರಾಹಿಂಪುರ, ಬೆಂಗಳೂರಿನ ರಾಜ್ಯ ತರಬೇತುದಾರ ಚಾಂದ್‌ ಪೀರ್, ಬೆಂಗಳೂರಿನ ಗ್ರಾಪಂ ಚುನಾಯಿತ ಮಹಿಳಾ ಸದಸ್ಯರ ರಾಜ್ಯ ಒಕ್ಕೂಟ ‘ಸುಗ್ರಾಮ’ದ ಸಲಹೆಗಾರರಾದ ರೇಷ್ಮಾ, ಬೆಂಗಳೂರಿನ ಇಂಡಿಯನ್ ಸೋಷಿಯಲ್ ಇನ್‌ಸ್ಟಿಟ್ಯೂಟ್‌ನ ಕರ್ನಾಟಕ ಔಟ್‌ರೀಚ್ ಘಟಕದ ಫೆಸಿಲೇಟಟರ್ ಸುಜಯ್ ಟಿ. ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು 38ನೇ ಕಳ್ತೂರು ಗ್ರಾಪಂನ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ವಹಿಸಿದ್ದರು. ಸುಶೀಲ ಕೆಂಜೂರು ಅತಿಥಿ ಗಳನ್ನು ಸ್ವಾಗತಿಸಿದರೆ, ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಅಮ್ಮಣ್ಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಶ್ಮಿತಾ ಕಳ್ತೂರು ವಂದಿಸಿ, ಸುರೇಂದ್ರ ಕಳ್ತೂರು ಕಾರ್ಯಕ್ರಮ ನಿರೂಪಿಸಿದರು.

ಬಳಿಕ ನಡೆದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಹೆಗ್ಗುಂಜೆ ಗ್ರಾಪಂನ ಪಂಚಾಯತ್ ಅಬಿವೃದ್ಧಿ ಅಧಿಕಾರಿ ಅನಿಲ್‌ ಕುಮಾರ್ ಶೆಟ್ಟಿ, ಹಂಗಳೂರು ಗ್ರಾಪಂ ಪಿಡಿಓ ರಾಜೇಶ್ ಕೆ.ಸಿ., ಚಾಂದ್‌ಪೀರ್, ಮುದರಂಗಡಿ ಗ್ರಾಪಂ ಪಿಡಿಓ ಸುರೇಶ್ ಹಾಗೂ ರೇಷ್ಮಾ ಇವರು ಭಾಗವಹಿಸಿ ಪಂಚಾಯತ್‌ರಾಜ್ ವ್ಯವಸ್ಥೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಶಿಬಿರಾರ್ಥಿ ಗಳಿಗೆ ಮಾಹಿತಿಗಳನ್ನು ನೀಡಿದರು.

ಸಮಾರೋಪ ಸಮಾರಂಭ ಕೊಕ್ಕರ್ಣೆ ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷೆ ಸುಶೀಲಾ ಕೆಂಜೂರು ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ಸುಕನ್ಯಾ ಶೆಟ್ಟಿ ಹಾಗೂ ಇತರರು ಭಾಗವಹಿಸಿದ್ದರು. ತರಬೇತಿಯಲ್ಲಿ ಒಟ್ಟು 32 ಮಂದಿ ಕೊರಗ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News