ಫಲಿಮಾರ್ ಮಸೀದಿಯಲ್ಲಿ ಮೀಲಾದುನ್ನಬಿ

Update: 2021-10-19 16:18 GMT

ಪಡುಬಿದ್ರಿ: ವಿಶ್ವಕ್ಕೆ ಮಾನವತೆಯ ಸಂದೇಶ ಸಾರಿದ ಪ್ರವಾದಿಯವರ ಚರ್ಯೆಯನ್ನು ಪಾಲಿಸಿಕೊಂಡು ಅನ್ಯೋನ್ಯತೆಯ ಜೀವನ ನಡೆಸುವುದರ ಮೂಲಕ ಆರೋಗ್ಯ ಪೂರ್ಣ  ಸಮಾಜ ನಿರ್ಮಾಣ ಸಾಧ್ಯ ಎಂದು ಫಲಿಮಾರ್ ಜಮಾಅತ್  ಖತೀಬ್  ರಿಯಾಝ್  ಫೈಝಿ  ಹೇಳಿದ್ದಾರೆ.

ಸೋಮವಾರ ಫಲಿಮಾರ್ ಹಯಾತುಲ್ ಇಸ್ಲಾಂ ಜುಮಾ ಮಸ್ಜಿದ್,  ನೂರುಲ್ ಹುದಾ  ಮದ್ರಸ ಕಾಂಜರಕಟ್ಟೆ ಹಾಗೂ  ಹಿದಾಯತುಲ್ ಇಸ್ಲಾಂ  ಮದ್ರಸ, ಎಸ್‍ಕೆಎಸ್‍ಎಸ್ ಎಫ್ ಫಲಿಮಾರ್ ಘಟಕ,  ಎಸ್‍ಕೆಎಸ್‍ಬಿವಿ  ಫಲಿಮಾರ್ ಘಟಕದ ಜಂಟಿ ಆಶ್ರಯದಲ್ಲಿ ಫಲಿಮಾರ್  ಹಯಾತುಲ್ ಇಸ್ಲಾಂ ಜುಮಾ ಮಸ್ಜಿದ್ ವಠಾರದಲ್ಲಿ  ಆಯೋಜಿಸಿದ ಪ್ರವಾದಿಯವರ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮಾನವ ಜೀವನದಲ್ಲಿ ಅಳವಡಿಸಲು ಪ್ರವಾದಿಯವರು  ಸಾರಿದ ಮತ್ತು  ಸ್ವತಃ  ಆಚರಿಸಿದ ಸಂದೇಶಗಳು, ಚರ್ಯೆಯನ್ನು  ನಾವು ಪಾಲಿಸಿದಾಗ ಸ್ವಸ್ಥ ಹಾಗೂ ಆರೋಗ್ಯ ಪೂರ್ಣ  ಸಮಾಜ ನಿರ್ಮಾಣ ಸಾಧ್ಯ ಎಂದು  ಹೇಳಿದರು.  ಯುವ ಜನಾಂಗ ವನ್ನು  ದುಶ್ಚಟ, ಅನಾಚಾರಗಳಿಂದ ಮುಕ್ತಗೊಳಿಸಲು ಸಮಾಜದ ಎಲ್ಲಾ ವರ್ಗದ ಜನರು ಪ್ರಯತ್ನಿಸಬೇಕೆಂದು ಕರೆ ನೀಡಿದರು.  

ಸಮಾರಂಭವನ್ನು  ಉದ್ಘಾಟನೆ ಮಾಡಿದ ಕಾಂಜರಕಟ್ಟೆ ನೂರುಲ್ ಹುದಾ ಮಸೀದಿಯ  ಇಮಾಮ್  ಹಾರಿಸ್  ಅಝ್ಹರಿ   ಶುಭ ಹಾರೈಸಿದರು.  ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ ಪಿ ಮೊಯಿದಿನಬ್ಬ, ಫಲಿಮಾರ್ ಜಮಾತ್ ಅಧ್ಯಕ್ಷ  ಕೆ. ಎಂ. ಬದ್ರುದ್ದೀನ್, ಮಾಜಿ ಅಧ್ಯಕ್ಷ  ಎಂ ಪಿ.  ಶೇಖಬ್ಬ  ಕಾರ್ಯದರ್ಶಿ  ಅಬ್ದುಲ್ ರೆಹಮಾನ್,  ಕೋಶಾಧಿಕಾರಿ  ಖಾಸಿಮ್, ಉಪಾಧ್ಯಕ್ಷ  ಟಿ.  ಉಮರ್  ನೂರುಲ್ ಹುದಾ ಮಸೀದಿಯ ಅಧ್ಯಕ್ಷ  ಕೆ.  ಎಸ್.  ಉಮರ್,  ಎಸ್ಕೆಎಸ್‍ಎಸ್‍ಎಫ್ ಅಧ್ಯಕ್ಷ  ದಾದಪೀರ್, ಮುಸ್ತಫಾ ಅರ್ಶದಿ,  ಬಾಸಿತ್ ಕೌಸರಿ,  ಮುಹ್ಯುದ್ದೀನ್ ಮುಸ್ಲಿಯಾರ್  ಉಪಸ್ಥಿತರಿದ್ದರು.

ಅಬ್ದುಲ್ ಕರೀಮ್  ಮುಸ್ಲಿಯಾರ್ ಸ್ವಾಗತಿಸಿದರು. ಸಲ್ಮಾನ್ ಹಾಗೂ  ಕರೀಮ್ ಮುಸ್ಲಿಯಾರ್  ಕಾರ್ಯಕ್ರಮ ನಿರ್ವಹಣೆ ಮಾಡಿ ದರು.  ಇನ್ನಾ,  ಫಲಿಮಾರ್,  ಕಾಂಜರಕಟ್ಟೆ ಮದರಸಗಳವಿದ್ಯಾರ್ಥಿಗಳಿಂದ ಪ್ರವಾದಿ ಸಂದೇಶಗಳನ್ನು ಒಳಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.  ಇದೇ ಸಂದರ್ಭ ಪ್ರತಿಭಾನ್ವಿತ ಮದ್ರಸ ವಿದ್ಯಾರ್ಥಿಗಳನ್ನು  ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News