ಮಂಗಳೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ; ನೇರ ಭೂ ಖರೀದಿ ವ್ಯವಸ್ಥೆಗೆ ದ.ಕ. ಜಿಲ್ಲಾಡಳಿತ ಒಲವು

Update: 2021-10-19 16:29 GMT

ಮಂಗಳೂರು : ಜಗತ್ತನ್ನೇ ನಲುಗಿಸಿದ್ದ ಮಂಗಳೂರು ವಿಮಾನ ದುರಂತ (2010, ಮೇ 22)ದ ಘಟನೆಯ ಬಳಿಕ ಭಾರೀ ಚರ್ಚೆಗೆ ಗ್ರಾಸವಾಗಿ, ಪ್ರಮುಖ ಬೇಡಿಕೆಯಾಗಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಪ್ರಕ್ರಿಯೆ ಇನ್ನೂ ವೇಗ ದೊರಕಿಲ್ಲ. ಕಳೆದ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿರುವ ಪ್ರಕ್ರಿಯೆಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ದ.ಕ. ಜಿಲ್ಲಾಡಳಿತವು ನೇರ ಭೂ ಖರೀದಿ ಪ್ರಕ್ರಿಯೆ ಮೂಲಕ ಭೂಸ್ವಾಧೀನಕ್ಕೆ ಮುಂದಾಗುವ ಬಗ್ಗೆ ಒಲವು ತೋರಿಸಿದೆ.

ಮಂಗಳೂರಿನಲ್ಲಿ ವಿಮಾನ ದುರಂತ ಸಂಭವಿಸಿದ ಬಳಿಕ ರನ್‌ವೇ ವಿಸ್ತರಣೆಯ ಕೂಗು ಬಹುವಾಗಿ ಕೇಳಿ ಬಂದಿತ್ತು. ಜತೆಗೆ ರನ್‌ವೇ ವಿಸ್ತರಣೆಯಾಗದ ಕಾರಣದಿಂದ ದೊಡ್ಡ ಗಾತ್ರದ ವಿಮಾನಗಳು ಇಳಿಯಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಸಾಕಷ್ಟು ಅಂತಾರಾಷ್ಟ್ರೀಯ ವಿಮಾನ ಯಾನಗಳು ಪಕ್ಕದ ರಾಜ್ಯದ ವಿಮಾನ ನಿಲ್ದಾಣಗಳಿಗೆ ವರ್ಗಾವಣೆಯಾಗುತ್ತಿದೆ ಎಂಬ ಆಕ್ಷೇಪವೂ ಕೇಳಿ ಬರುತ್ತಿದೆ.

ವಿಮಾನ ನಿಲ್ದಾಣ ಅಭಿವೃದ್ಧಿಗೆ ಜಮೀನು ಒದಗಿಸುವುದು ಆಯಾ ರಾಜ್ಯ ಸರಕಾರದ ಹೊಣೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಕೊಳಂಬೆ, ಅದ್ಯಪಾಡಿ ಪ್ರದೇಶದಲ್ಲಿ ಜಮೀನು ಗುರುತಿಸಿ ಜಿಲ್ಲಾಡಳಿತ ರಾಜ್ಯ ಸರಕಾರದ ಮೂಲ ಸೌಕರ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಹಲವು ವರ್ಷಗಳೇ ಕಳೆದಿವೆ. ಭೂ ಸ್ವಾಧೀನದ ವೆಚ್ಚವನ್ನು ರಾಜ್ಯ ಸರಕಾರ, ಕಾಮಗಾರಿ ವೆಚ್ಚವನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಭರಿಸುವ ಬಗ್ಗೆ ತೀರ್ಮಾನವಾಗಿತ್ತು. ಆದರೆ ಯೋಜನೆಯ ಸಂಪೂರ್ಣ ವೆಚ್ಚವನ್ನು ಪ್ರಾಧಿಕಾರವೇ ಭರಿಸಬೇಕೆಂದು ರಾಜ್ಯದ ಸರಕಾರ ನಿಲುವು ತೋರಿದ್ದ ಹಿನ್ನೆಲೆಯಲ್ಲಿ ರನ್‌ವೇ ವಿಸ್ತರಣೆಗೆ ತೊಡಕಾಗಿತ್ತು.

ಈ ನಡುವೆ, ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಂಸ್ಥೆಗೆ ವಹಿಸಿದ ಬಳಿಕ ರನ್ ವೇ ವಿಸ್ತರಣೆ ಪ್ರಕ್ರಿಯೆ ಮತ್ತೆ ನೆನೆಗುದಿಗೆ ಬಿದ್ದಿದೆ. ಮಂಗಳೂರು ಏರ್‌ಪೋರ್ಟ್‌ನ ಪ್ರಸಕ್ತ ರನ್‌ವೇ 8,038 ಅಡಿ ಉದ್ದವಿದೆ. 2013ರಲ್ಲಿ ಇದನ್ನು 11,600 ಅಡಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಗೆ 280 ಎಕರೆ ಜಾಗ ಹಾಗೂ 1,120 ಕೋಟಿ ರೂ. ವೆಚ್ಚ ಎಂದು ಅಂದಾಜಿಸಲಾಗಿತ್ತು.

ಯೋಜನೆಗೆ ಭೂಸ್ವಾಧೀನ ನಡೆಸಲು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ, ಅಧಿಕ ಮೊತ್ತ ಅಗತ್ಯವಿದ್ದ ಕಾರಣ ರನ್‌ವೇ ವಿಸ್ತರಣೆಯನ್ನು 10,500 ಅಡಿಗೆ ಇಳಿಸಲು ತೀರ್ಮಾನಿಸಲಾಯಿತು. ಅದೂ ಕೂಡ ಹೊರೆಯಾದ ಕಾರಣದಿಂದ ಸದ್ಯ 33 ಎಕರೆ ಭೂಸ್ವಾಧೀನಕ್ಕೆ ಸರಕಾರ ಚಿಂತನೆ ನಡೆಸಿದೆ. ಆದರೆ ಈಗ ವಿಮಾನ ನಿಲ್ದಾಣ ನಿರ್ವಹಣೆ ಅದಾನಿ ಸಂಸ್ಥೆಗೆ ಹೋಗಿರುವ ಕಾರಣದಿಂದ ಅವರಿಂದ ಭೂಸ್ವಾಧೀನ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಪ್ರಾಧಿಕಾರದ ಮೂಲಕವೇ ಭೂಸ್ವಾಧೀನ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎನ್ನುತ್ತಿದೆ ದ.ಕ. ಜಿಲ್ಲಾಡಳಿತ.

''ಮಂಗಳೂರು ಏರ್‌ಪೋರ್ಟ್‌ನ ರನ್‌ವೇ ವಿಸ್ತರಣೆಗಾಗಿ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ದರ ಸಂಧಾನ ಮಾಡಿಕೊಂಡು ಭೂಮಿ ನೀಡಲು ಬಯಸುವ ಭೂ ಮಾಲಕರಿಂದ ಮಾರುಕಟ್ಟೆ ದರದಲ್ಲಿ ನೇರವಾಗಿ ಭೂಮಿ ಖರೀದಿ ಮಾಡುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಭೂಮಿಯ ದರ ನಿಗದಿ ಹಾಗೂ ಪೂರಕ ವ್ಯವಸ್ಥೆಗಳನ್ನು ಜಿಲ್ಲಾಡಳಿತ ನಡೆಸಲಿದೆ. ಇದಕ್ಕೆ ಬೇಕಾಗುವ ಮೊತ್ತವನ್ನು ನಿರ್ವಹಣೆ ವಹಿಸಿಕೊಂಡಿರುವ ಅದಾನಿ ಸಂಸ್ಥೆಯವರು ನೀಡಬೇಕಾಗುತ್ತದೆ''.

- ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News