ಕಾರ್ಕಳ; ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಮೀಲಾದ್ ಅಭಿಯಾನ
ಕಾರ್ಕಳ : ‘ಪ್ರವಾದಿ ಮುಹಮ್ಮದ್ (ಸ.ಅ.)ರವರ ಜೀವನ ಆದರ್ಶಗಳು ಮನುಷ್ಯ ಕುಲಕ್ಕೆ ಬದುಕಿನ ಬಹುದೊಡ್ಡ ನೀತಿ ಪಾಠವಾಗಿದೆ. ಪ್ರವಾದಿಯವರು ಬದುಕಿದ ರೀತಿ, ತೋರಿಸಿದ ಸತ್‍ಪಥ ಯೋಗ್ಯ ರೀತಿಯ ಬದುಕಿಗೆ ದಾರಿ ದೀಪವಾಗಿದೆ. ಅಲ್ಲಾಹನು ಭೂಮಿಯ ಮೇಲೆ ಶಾಂತಿಯನ್ನು ಮರುಸ್ಥಾಪಿಸಲು ಮುಹಮ್ಮದ್ ಮುಸ್ತಪಾ (ಸ.ಅ.) ಅವರಿಗೆ ಬಹುದೊಡ್ಡ ಉತ್ತರದಾಯಿತ್ವವನ್ನು ನೀಡುತ್ತಾನೆ. ಅವರ ಆಗಮನಕ್ಕೂ ಮೊದಲು ಈ ಜಗತ್ತಿನಲ್ಲಿ ತುಂಬಿದ್ದ ಮೌಡ್ಯ, ಅಂಧಕಾರಗಳ ಬಗ್ಗೆ ಇತಿಹಾಸಕಾರರು ಸಂಶೋಧನೆಯನ್ನು ನಡೆಸಿ, ದಾಖಲಿಸಿದ್ದು, ಪ್ರವಾದಿಯವರ ಆಗಮನದ ಬಳಿಕ ಶಾಂತಿ ಸ್ಥಾಪನೆ ಸಾಧ್ಯವಾಗಿತ್ತು. ಶಾಂತಿಧೂತರಾದ ಪ್ರವಾದಿಯವರ ಸತ್ಯನುಡಿಗಳು ನಾಡಿನ ಜನರಿಗೆ ಅರಿವಾಗಬೇಕೆಂಬುದು ನಮ್ಮ ಉದ್ದೇಶ’ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕಾರ್ಕಳ ಘಟಕ ಅಧ್ಯಕ್ಷರಾದ ಮುಬೀನ್ ಹೇಳಿದರು.
ಅವರು ಜಮಾಅತೆ ಇಸ್ಲಾಮಿ ಹಿಂದ್ ಕಾರ್ಕಳ ಘಟಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
`ಖ್ಯಾತ ಲೇಖಕ ಮೈಕಲ್ ಹಾರ್ಟ್ ಬರೆದಿರುವ ‘ದಿ ಹಂಡ್ರೆಡ್’ ಎಂಬ ಪುಸ್ತಕ ಜಗತ್ತಿನ ಮಹಾನ್ ವ್ಯಕ್ತಿಗಳ ಕುರಿತ ವಿಶ್ಲೇಷಣೆಯಾಗಿದ್ದು, ಲೇಖಕರು ತಾನೋರ್ವ ಕ್ರೈಸ್ತ ಧರ್ಮೀಯರಾಗಿದ್ದರೂ ಕೃತಿಯಲ್ಲಿ ಜಾಗತಿಕ ಮಹಾನ್ ವ್ಯಕ್ತಿಗಳ ಪೈಕಿ ಮೊದಲ ಸ್ಥಾನದಲ್ಲಿ ಗುರುತಿಸಿದ್ದು ಪ್ರವಾದಿ ಮುಹಮ್ಮದ್ (ಸ.ಅ.) ಎಂಬ ಮಹಾನ್ ಚೇತನವನ್ನು ಎಂಬುದು ಗಮನಾರ್ಹ ಸಂಗತಿಯಾಗಿದೆ. ಇದೇ ಕೃತಿಯಲ್ಲಿ 2ನೇ ಸ್ಥಾನವನ್ನು ಲೇಖಕ ನ್ಯೂಟನ್ ಅವರಿಗೆ ನೀಡಿದ್ದರು. ಹೀಗೆ, ಜ್ಞಾನ - ಹಾಗೂ ವಿಜ್ಞಾನ ಎಂಬ ಕೃತಿಕಾರರ ಆಯ್ಕೆಯ ಬಗ್ಗೆ ಪ್ರಶ್ನಿಸಿದಾಗ ಅವರಿಂದ ದೊರಕಿದ ಉತ್ತರವು ಅಚ್ಚರಿದಾಯಕವಾಗಿತ್ತು’ ಲೋಕದಲ್ಲಿ ಅದೆಷ್ಟೋ ಮಹಾಪುರುಷರ ಜನನವಾಗಿದೆ. ಜಗತ್ತಿಗೆ ಒಳಿತನ್ನು ಮಾಡಿದ, ಶಾಂತಿಯನ್ನು ಸ್ಥಾಪಿಸಿದ ಅನೇಕ ಮಹನೀಯರಿದ್ದಾರೆ. ಅಹಿಂಸೆ, ಶಾಂತಿಯನ್ನು ಬೋಧಿಸಿದ, ತತ್ವಜ್ಞಾನವನ್ನು ಹರಡಿದ ಅನೇಕ ಮಹಾನ್ ನಾಯಕರನ್ನು ನಾವು ಕಂಡಿದ್ದೇವೆ. ಇತಿಹಾಸ ಅನೇಕರನ್ನು ಈ ಹಿನ್ನಲೆಯಲ್ಲಿಯೇ ಗುರುತಿಸುತ್ತಿದೆ. ಆದರೆ ಅಹಿಂಸೆ, ಶಾಂತಿಯನ್ನು ಬೋಧಿಸಿದ್ದಷ್ಟೇ ಅಲ್ಲದೇ ಅದನ್ನು ವಿಶ್ವದಲ್ಲಿ ಸ್ಥಾಪಿಸಿದ್ದು ಪ್ರವಾದಿ ಮುಹಮ್ಮದ್ ನಬಿಯವರು ಎಂಬುದು ಕೃತಿಕಾರ ಮೈಕಲ್ ಹಾರ್ಟ್ ನೀಡಿರುವ ಉತ್ತರವಾಗಿದೆ’ ಎಂದು ವಿವರಿಸಿದರು.
`ಪ್ರವಾದಿಯವರು ಒಳಿತಿನ ಉತ್ಥಾನ ಮತ್ತು ಕೆಡುಕಿನ ನಿರ್ಮೂಲನೆಗಾಗಿ ಒಳಿತನ್ನು ಬೋಧಿಸುತ್ತಾ ಅಲ್ಲಾಹನ ಆದೇಶದಂತೆ ಕುರ್‍ಆನಿನ ವಚನಗಳನ್ನು ಪಾಲಿಸಿ, ಜನರೆಡೆಯಲ್ಲಿ ಪಸರಿಸಿ ಮಾನವ ಕುಲದ ಉನ್ನತಿಗಾಗಿ ಶ್ರಮಿಸಿದರು. ಅತ್ಯಂತ ಕೆಳಮಟ್ಟದಲ್ಲಿದ್ದ ಸಮುದಾಯವೊಂದನ್ನು ವಿಶ್ವದಲ್ಲಿಯೇ ಅತ್ಯಂತ ಉನ್ನತ ದರ್ಜೆಯ ಸಂಸ್ಕೃತಿಯುಳ್ಳವರಾಗಿ ಬದುಕುವಂತೆ ಮಾಡಿದವರು. ಕುರ್‍ಆನಿನ ವಚನಗಳು ಅಲ್ಲಾಹನ ಕಡೆಯಿಂದ ಅವತೀರ್ಣಗೊಂಡು ವಿಶ್ವವ್ಯಾಪಕವಾಗಿ ಹರಡಿದ ಪ್ರವಾದಿ ಯವರು ಮನುಷ್ಯನಿಗೆ ಮಾರ್ಗದರ್ಶಿಯಾದರು’
ಈಗ ಜಗತ್ತಿನಲ್ಲಿ ಇಸ್ಲಾಮಿನ ಚಿಂತನೆಗಳ ಬಗ್ಗೆ ಉಂಟಾಗಿರುವ ಶಂಕೆಯನ್ನು ಪ್ರವಾದಿಯವರ ಜೀವನ ವಿಧಾನಗಳನ್ನು ನಾವು ಪಾಲಿಸುವ ಮೂಲಕ ಜನರಿಗೆ ತಿಳಿಸಿ ಕೊಡಬೇಕಿದೆ. ಇಸ್ಲಾಂ ಧರ್ಮವು ಯಾವುದನ್ನು ಪ್ರತಿನಿಧಿಸುತ್ತದೆ ಮತ್ತು ಯಾವುದನ್ನು ವಿರೋಧಿಸುತ್ತದೆ ಎಂಬ ಸರಿಯಾದ ಕಲ್ಪನೆ ಜನರಲ್ಲಿ ಮೂಡಬೇಕು. ಅಂತಹ ಜವಾಬ್ದಾರಿಯು ಪ್ರತಿಯೊಬ್ಬ ಮುಸಲ್ಮಾನನಿಗೂ ಇರಬೇಕು. ಪ್ರವಾದಿಯವರ ಜೀವನಾನಂತರ ಖಲೀಫರ ಆಡಳಿತ ಆರಂಭಗೊಂಡಿತ್ತು. ಆ ಸಂದರ್ಭದಲ್ಲಿ 6 ವಿಷಯಗಳ ಬಗ್ಗೆ ಪ್ರಾಮುಖ್ಯತೆ ನೀಡಲಾಗಿತ್ತು. ಮುಸ್ಲಿಂ ಆಳ್ವಿಕೆಯಲ್ಲಿರುವ ದೇಶದಲ್ಲಿ ಉಳಿದ ಎಲ್ಲಾ ಧರ್ಮಗಳ ಸಂರಕ್ಷಣೆಯಾಗಬೇಕು. ಜನ ಜೀವನ ಸಂರಕ್ಷಣೆ, ಜನರ ಸಂಪತ್ತಿನ ರಕ್ಷಣೆ, ಜನರ ಬುದ್ಧಿಯ ರಕ್ಷಣೆ - ಮಾದಕ ವ್ಯಸನಗಳು, ಮಾದಕ ಪದಾರ್ಥಗಳಿಂದ ದೇಶದ ಪ್ರಜೆಗಳು ದೂರವಿರುವಂತೆ ನೋಡಿಕೊಳ್ಳುವುದು, ಕುಟುಂಬ ವ್ಯವಸ್ಥೆಯನ್ನು ರಕ್ಷಿಸುವುದು – ಅನೈತಿಕ ಸಂಬಂಧಗಳನ್ನು ತಡೆಯುವುದು ಹಾಗೂ ಮದುವೆ ಎಂಬ ಮೌಲ್ಯಾಧಾರಿತ ಚೌಕಟ್ಟನ್ನು ಮುಂದುವರಿಸುವ ಮೂಲಕ ಕೌಟುಂಬಿಕ ವ್ಯವಸ್ಥೆಯನ್ನು ಪಾಲಿಸುವುದು, ಮಹಿಳಾ ಸಮಾನತೆ ಹಾಗೂ ಅವರಿಗೆ ಮಹತ್ವ ನೀಡುವುದು – ಈ 6 ತತ್ವಗಳಾಗಿವೆ’
`ಪ್ರವಾದಿಯವರ ಆಗಮನಕ್ಕೂ ಮೊದಲು ಆ ಸಮಾಜದಲ್ಲಿದ್ದ ಮಹಿಳೆಯರ ಸ್ಥಿತಿಗತಿಯ ಬಗ್ಗೆಯಿರುವ ಐತಿಹಾಸಿಕ ವಿವರಗಳನ್ನು ಓದಿದರೆ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಇಸ್ಲಾಂ ಕೊಟ್ಟಿರುವ ಮಹತ್ವ ಮನವರಿಕೆ ಸಾಧ್ಯವಾಗುವುದು. ಆದರೆ ಕುರುಆನ್ ಹಾಗೂ ಹದೀಸ್‍ಗಳ ಮೂಲಕ ನೈಜ ಇಸ್ಲಾಂ ಏನು ಎಂಬುದನ್ನು ಅರಿಯಬೇಕಿದೆ. ಬದುಕಿನ ರೀತಿ, ನೀತಿಗಳಾಚೆಗೂ ಧಾರ್ಮಿಕ ಚೌಕಟ್ಟಿನೊಳಗೆ ಬದುಕು ನಡೆಸುವ, ಮಾನವೀಯ ನೆಲೆಯ ವಾತಾವರಣ ನೆಲೆಗೊಳ್ಳಬೇಕಿದೆ. ಸಮಾಜ ಸುಧಾರಣೆಯ ಜವಾಬ್ದಾರಿಯನ್ನು ಪ್ರವಾದಿಯವರು ಪೂರ್ಣಗೊಳಿಸಿದ್ದು, ಅವರ ಅನುಯಾಯಿಗಳು ತಮ್ಮ ಬದುಕಿನುದ್ದಕ್ಕೂ ಪ್ರವಾದಿ ಮಾರ್ಗದರ್ಶನವನ್ನು ಅಳವಡಿಸಿಕೊಳ್ಳಬೇಕಿದೆ.’
`ಸಮಾಜದಲ್ಲಿ ಇತ್ತೀಚಿನ ಶತಮಾನದಲ್ಲಿ ವ್ಯಾಪಕವಾಗುತ್ತಿರುವ ಅಶ್ಲೀಲತೆ, ನಶೆ, ಲಂಚ, ಭ್ರಷ್ಟಾಚಾರ ಮುಂತಾದ ಕೆಡುಗುಗಳ ಬಗ್ಗೆ ಪ್ರವಾದಿಯವರು ತಮ್ಮ ಜೀವನ ಪಾಠದ ಮೂಲಕ ಕಲಿಸಿಕೊಡಬೇಕಿದೆ. ಜನರೆಡೆಯಲ್ಲಿ ಇಂದು ಇಸ್ಲಾಂ ಧರ್ಮವನ್ನು ದ್ವೇಷಿಸುವಂತೆ ಬಿಂಬಿಸುವ ಷಡ್ಯಂತ್ರಗಳು ವ್ಯಾಪಕವಾಗುತ್ತಿದೆ. ಆದರೆ ಇಸ್ಲಾಂ ಏನು ಎಂಬ ಬಗ್ಗೆ, ಮುಸ್ಲಿಮರು ತಮ್ಮ ಬದುಕಿನ ರೀತಿಯ ಮೂಲಕ ತೋರಿಸಿಕೊಡಬೇಕಿದೆ. ಮಹಾತ್ಮ ಗಾಂಧಿ, ಬಸವಣ್ಣನವರು, ಶ್ರೀ ನಾರಾಯಣಗುರುಗಳು ಹೀಗೆ ಅನೇಕ ಮಹಾಪುರುಷರು ಬಯಸಿದ ಶಾಂತಿಯ, ಸಾಮರಸ್ಯದ ಬದುಕನ್ನೇ ಪ್ರವಾದಿಯವರು ಬಯಸಿದ್ದು, ಆ ಮೂಲಕ ವಿಶ್ವಶಾಂತಿಯೇ ನಮ್ಮೆಲ್ಲರ ಧ್ಯೇಯವಾಗಬೇಕು. ಈ ಕಾರಣದಿಂದಲೇ ಪ್ರವಾದಿಯವರ ಜನ್ಮದಿನ ಆಚರಣೆ ನಡೆಯುವ ರಬೀಉಲ್ ಅವ್ವಲ್ ಅರೇಬಿಕ್ ತಿಂಗಳಲ್ಲಿ ಜಮಾಅತೇ ಇಸ್ಲಾಮೀ ಹಿಂದ್ ಅಭಿಯಾನವನ್ನು ನಡೆಸುತ್ತಿದೆ’. ಎಂದರು.
`ಅಭಿಯಾನದಲ್ಲಿ ನೈತಿಕ ಮೌಲ್ಯಗಳ ಪ್ರಚಾರ, ಪರಸ್ಪರ ಅರಿಯುವುದು, ಪ್ರವಾದಿ ವಚನಗಳು ಹಾಗೂ ಸಂದೇಶ ಪ್ರಚಾರ, ಪ್ರಬಂಧ ಸ್ಪರ್ಧೆ, ಶುಚಿತ್ವ ಅಭಿಯಾನ, ರಕ್ತದಾನ ಶಿಬಿರ, ಗಿಡ ನೆಡುವುದು, ಆಸ್ಪತ್ರೆಯಲ್ಲಿ ರೋಗಿಗಳ ಭೇಟಿ ಹೀಗೆ ಅನೇಕ ಕಾರ್ಯಕ್ರಮಗಳು ಸಂಘಟನೆಯ ವತಿಯಿಂದ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೆಹನಾ ಇಕ್ಬಾಲ್, ಹುಮೈರಾ ಖಾತೂನ್, ಸಯ್ಯದ್ಅ ಶ್ಫಾಕ್ , ತನ್ವೀರಾ ಖಲೀಲ್ ಉಪಸ್ಥಿತರಿದ್ದರು.