ಬೀಜಿಂಗ್ ‘ನರಮೇಧ’ ಒಲಿಂಪಿಕ್ಸ್ ಬಹಿಷ್ಕರಿಸಿ: ಮಾನವ ಹಕ್ಕು ಕಾರ್ಯಕರ್ತರ ಆಗ್ರಹ

Update: 2021-10-19 17:58 GMT
photo:twitter/@olympics

ಅಥೆನ್ಸ್, ಅ.19: 2022ರ ಚಳಿಗಾಲದ ಒಲಿಂಪಿಕ್ಸ್ನ ಜ್ಯೋತಿಯನ್ನು ಚೀನಾಕ್ಕೆ ಹಸ್ತಾಂತರಿಸುವ ಮೂಲಕ ಚೀನಾದಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆ ಕ್ರಮಗಳಿಗೆ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಕಾನೂನು ಸಮ್ಮತಿ ನೀಡಿದಂತಾಗಿದೆ ಎಂದು ಮಾನವ ಹಕ್ಕು ಕಾರ್ಯಕರ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೀನಾದಲ್ಲಿ ನಡೆಯುತ್ತಿರುವ ‘ನರಮೇಧ ಕ್ರೀಡಾಕೂಟ’ವನ್ನು ಬಹಿಷ್ಕರಿಸುವಂತೆ ಕಾರ್ಯಕರ್ತರು ಅಂತರಾಷ್ಟ್ರೀಯ ಸರಕಾರಗಳನ್ನು ಆಗ್ರಹಿಸಿದ್ದಾರೆ. ಅಥೆನ್ಸ್ ನಲ್ಲಿ ಸೋಮವಾರ ಕ್ರೀಡಾಜ್ಯೋತಿ ಬೆಳಗಿಸುವ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತರು, ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಆಷಾಡಭೂತಿತನಕ್ಕೆ ನಾವು ಮತ್ತೊಮ್ಮೆ ಸಾಕ್ಷಿಯಾಗಿದ್ದೇವೆ ಎಂದರು. ಅಥೆನ್ಸ್ ಕ್ರೀಡಾಂಗಣದಲ್ಲಿ ನಡೆದ ಜ್ಯೋತಿ ಹಸ್ತಾಂತರ ಕಾರ್ಯಕ್ರಮದ ವೇದಿಕೆಗೆ ನುಗ್ಗಲು ಪ್ರಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತೆದಿದ್ದು 9 ಮಂದಿಯನ್ನು ಬಂಧಿಸಿದ್ದಾರೆ.

ಅಥೆನ್ಸ್ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅಂತರಾಷ್ಟ್ರೀಯ ಟಿಬೆಟ್ ನೆಟ್ವರ್ಕ್ನ ಕಾರ್ಯನಿರ್ವಾಹಕ ನಿರ್ದೇಶಕ ಮ್ಯಾಂಡೀ ಮೆಕಾನ್ ‘ಒಲಿಂಪಿಕ್ಸ್ನ ಆಶಯಗಳಲ್ಲಿ ಒಂದನ್ನೂ ಎತ್ತಿಹಿಡಿಯಲು ವಿಫಲವಾದ ದೇಶಕ್ಕೆ ಅವರು ಒಲಿಂಪಿಕ್ ಜ್ಯೋತಿಯನ್ನು ಹಸ್ತಾಂತರಿಸುತ್ತಿದ್ದಾರೆ. ಒಂದು ರೀತಿಯ ವಿಕೃತ ವಾಸ್ತವದಲ್ಲಿ ನಾವು ಜೀವಿಸುತ್ತಿುವಂತೆ ಭಾಸವಾಗುತ್ತಿದೆ’ ಎಂದರು.

ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ಉಯಿಗರ್ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ, ಹಾಂಗ್ಕಾಂಗ್ನಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಕೈಗೊಂಡ ಕ್ರಮಗಳ ಬಗ್ಗೆ, ಟಿಬೆಟ್ ಮತ್ತು ತೈವಾನ್ ಕುರಿತ ಚೀನಾದ ಆಕ್ರಮಣಕಾರಿ ನೀತಿಯ ಬಗ್ಗೆ ಜಾಗತಿಕವಾಗಿ ಟೀಕಾ ಪ್ರವಾಹ ಎದುರಾಗಿದೆ. ಆದರೆ, ಮುಂದಿನ ವರ್ಷದ ಫೆಬ್ರವರಿ 4ರಿಂದ 20ರವರೆಗೆ ನಡೆಯುವ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥೇಯತ್ವವನ್ನು ಚೀನಾಕ್ಕೆ ವಹಿಸಿದ್ದು ಈ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಅಂತರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News