2023ರ ಏಶ್ಯನ್ ಕಪ್‌ಗೆ ಅರ್ಹತೆ ಪಡೆಯುವುದು ಈಗಿನ ಪ್ರಧಾನ ಗುರಿ: ಭಾರತೀಯ ಫುಟ್ಬಾಲ್ ತಂಡದ ಪ್ರಧಾನ ಕೋಚ್

Update: 2021-10-19 18:33 GMT
photo:twitter/@IndianFootball

ಹೊಸದಿಲ್ಲಿ, ಅ. 19: ಎಸ್‌ಎಎಫ್‌ಎಫ್ (ದಕ್ಷಿಣ ಏಶ್ಯ ಫುಟ್ಬಾಲ್ ಫೆಡರೇಶನ್) ಚಾಂಪಿಯನ್‌ಶಿಪ್‌ಅನ್ನು ಭಾರತ ಎಂಟನೇ ಬಾರಿಗೆ ಗೆದ್ದಿರುವುದು ‘‘ವಿಶೇಷ ಯಶಸ್ಸು’’ ಏನೂ ಅಲ್ಲ, ಯಾಕೆಂದರೆ ದಕ್ಷಿಣ ಏಶ್ಯ ವಲಯದ ಫುಟ್ಬಾಲ್‌ನಲ್ಲಿ ಭಾರತ ಪ್ರಬಲವಾಗಿದೆ ಎಂದು ಭಾರತದ ರಾಷ್ಟ್ರೀಯ ಫುಟ್ಬಾಲ್ ತಂಡದ ಪ್ರಧಾನ ಕೋಚ್ ಐಗರ್ ಸ್ಟಿಮಕ್ ಮಂಗಳವಾರ ಹೇಳಿದ್ದಾರೆ.

2023ರ ಏಶ್ಯನ್ ಕಪ್‌ಗೆ ಅರ್ಹತೆ ಪಡೆಯುವ ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡುವುದು ತಂಡದ ಈಗಿನ ದೊಡ್ಡ ಗುರಿಯಾಗಿದೆ ಎಂದು ಆನ್‌ಲೈನ್ ಮುಖಾಮುಖಿಯ ವೇಳೆ ಮಾತನಾಡಿದ ಅವರು ತಿಳಿಸಿದರು.

ಮಾಲ್ದೀವ್ಸ್ ರಾಜಧಾನಿ ಮಾಲೆಯಲ್ಲಿ ಶನಿವಾರ ನಡೆದ ಎಸ್‌ಎಎಫ್‌ಎಫ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತವು ನೇಪಾಳವನ್ನು 3-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿದೆ. ಇದು ಸ್ಟಿಮಕ್ ತಂಡದ ಪ್ರಧಾನ ಕೋಚ್ ಆದ ಬಳಿಕ ಭಾರತ ಗಳಿಸಿದ ಮೊದಲ ಟ್ರೋಫಿಯಾಗಿದೆ.

ಆದರೆ ಮೊದಲ ಎರಡು ರೌಂಡ್-ರಾಬಿನ್ ಲೀಗ್ ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳ ವಿರುದ್ಧ ಭಾರತ ಡ್ರಾ ಸಾಧಿಸಿದ ಬಳಿಕ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಭಾರತ ಅಗಾಧ ಒತ್ತಡಕ್ಕೆ ಒಳಗಾಗಿತ್ತು ಎನ್ನುವುದನ್ನು ಅವರು ಒಪ್ಪಿಕೊಂಡರು. ಈ ಡ್ರಾಗಳಿಂದಾಗಿ ಭಾರತ ಫೈನಲ್ ತಲುಪದಿರುವ ಸಾಧ್ಯತೆಯೂ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News